ಆಯಿಶಾ ಆತ್ಮಹತ್ಯೆಯ ಬಳಿಕ 'ವರದಕ್ಷಿಣೆ ನಿಲ್ಲಿಸುವುದಾಗಿ' ಪ್ರತಿಜ್ಞೆ ಮಾಡಿದ ಆಗ್ರಾದ ಮುಸ್ಲಿಮರು

Update: 2021-03-07 11:21 GMT

ಆಗ್ರಾ: ಗುಜರಾತ್‌ ನ ಅಹಮದಾಬಾದ್‌ನಲ್ಲಿ ಆಯಿಶಾ ಆರಿಫ್ ಖಾನ್ ಎಂಬ 23 ವರ್ಷದ ಯುವತಿಯು ವರದಕ್ಷಿಣೆ ಕಿರುಕುಳಕ್ಕೊಳಗಾಗಿ ವೀಡಿಯೋ ಚಿತ್ರೀಕರಣ ನಡೆಸಿ ನದಿಗೆ ಹಾರಿ ಆತ್ಮಹತ್ಯೆಗೈದಿದ್ದರು. ಈ ಪ್ರಕರಣವು ಸದ್ಯ ಆಗ್ರಾದಲ್ಲಿ ಭಾರೀ ಚರ್ಚೆಗೊಳಗಾಗಿದೆ. 

ಆಗ್ರಾದಲ್ಲಿನ ಮುಸ್ಲಿಮರು ಈಗ "ಇಲ್ಲಿರುವ ಎಲ್ಲಾ ಮುಸ್ಲಿಂ ವಿವಾಹಗಳಲ್ಲಿ ವರದಕ್ಷಿಣೆ ವಿನಿಮಯವನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ" ಎಂದು indiatoday.in ವರದಿ ಮಾಡಿದೆ. ಶುಕ್ರವಾರದ ನಮಾಜ್ ಬಳಿಕ ಆಗ್ರಾದ ಸ್ಥಳೀಯ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ಮುಖಂಡರು ಆಯಿಶಾಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು.

"ಇಸ್ಲಾಂ ಧರ್ಮದಲ್ಲಿ ವರದಕ್ಷಿಣೆ ನಿಷೇಧಿಸಲಾಗಿದೆ ಮತ್ತು ಮುಸ್ಲಿಂ ಸಮುದಾಯವು ವರದಕ್ಷಿಣೆ ತ್ಯಜಿಸುವ ಮೂಲಕ ಪವಿತ್ರ ಕುರ್‌ಆನ್‌ನಲ್ಲಿನ ಬೋಧನೆಗಳನ್ನು ಅನುಸರಿಸಬೇಕು" ಎಂದು ಮುಸ್ಲಿಂ ವಿದ್ವಾಂಸ ಹಫೀಝ್ ಮುಹಮ್ಮದ್ ಯಹ್ಯಾ ಖಾನ್ ಹೇಳಿದ್ದಾರೆ.

ಎಲ್ಲಾ ಮುಸ್ಲಿಂ ವಿವಾಹಗಳಲ್ಲಿ ವರದಕ್ಷಿಣೆ ವಿನಿಮಯವನ್ನು ನಿಷೇಧಿಸಿಸಲು ಸಮುದಾಯವು ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹಿಂದೂಸ್ತಾನಿ ಬಿರಾದಾರಿ ಕಾರ್ಯದರ್ಶಿ ಝಿಯಾವುದ್ದೀನ್ ಹೇಳಿದರು.

"ಅಹಮದಾಬಾದ್‌ನಲ್ಲಿ ಆಯೆಷಾಗೆ ಏನಾಯಿತೋ, ಅದು ಮುಂದೆ ಇನ್ನೋರ್ವ ಯಾವಿದೇ ಮಗಳಿಗೆ ಸಂಭವಿಸಬಹುದು. ಅದನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ" ಎಂದು ಝಿಯಾವುದ್ದೀನ್ ಹೇಳಿದರು.

"ಸೊಸೆಯನ್ನು ಸ್ವಂತ ಮಗಳಂತೆ ಪರಿಗಣಿಸುವ ದಿನ, ವರದಕ್ಷಿಣೆ ಮತ್ತು ವರದಕ್ಷಿಣೆಗಾಗಿ ನಡೆಯುವ ಶೋಷಣೆ ಅದರಷ್ಟಕ್ಕೇ ಕೊನೆಗೊಳ್ಳುತ್ತದೆ. ವರದಕ್ಷಿಣೆಗಾಗಿ ಶೋಷಣೆ ಮಾಡುವವರನ್ನು ಕಠಿಣ ದಂಡನೆಗೆ ಒಳಪಡಿಸಬೇಕು" ಎಂದು ಝಿಯಾವುದ್ದೀನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News