ಉತ್ತರಪ್ರದೇಶ: ಮದ್ರಸಗಳಲ್ಲಿ ಭಗವದ್ಗೀತೆ, ರಾಮಾಯಣ ಬೋಧನೆ ಕಡ್ಡಾಯ: ತೀವ್ರ ವಿರೋಧ ವ್ಯಕ್ತ

Update: 2021-03-07 17:01 GMT
ಸಾಂದರ್ಭಿಕ ಚಿತ್ರ

ಲಕ್ನೋ,ಮಾ.7: ನೂರು ಸ್ವಾಯತ್ತ ಮದ್ರಸಗಳಲ್ಲಿ ಭಗವದ್ಗೀತೆ ಮತ್ತು ರಾಮಾಯಣದಂತಹ ಹಿಂದು ಮಹಾಕಾವ್ಯಗಳ ಬೋಧನೆಯನ್ನು ಕಡ್ಡಾಯಗೊಳಿಸುವ ರಾಷ್ಟ್ರೀಯ ಮುಕ್ತ ವಿದ್ಯಾಲಯ ಶಿಕ್ಷಣ ಸಂಸ್ಥೆ (ಎನ್ಐಒಎಸ್)ಯ ನಿರ್ಧಾರವನ್ನು ಉತ್ತರ ಪ್ರದೇಶದ ಸ್ವಾಯತ್ತ ಮದ್ರಸಗಳು ತೀವ್ರವಾಗಿ ವಿರೋಧಿಸಿವೆ.

ನೂತನ ಶಿಕ್ಷಣ ನೀತಿ (ಎನ್ಇಪಿ)ಯಲ್ಲಿನ ಪ್ರಾಚೀನ ಭಾರತೀಯ ಜ್ಞಾನ ಮತ್ತು ಪರಂಪರೆ ಕುರಿತು ಪಠ್ಯಕ್ರಮದ ಭಾಗವಾಗಿ ಎನ್ಐಒಎಸ್ ಈ ನಿಯಮವನ್ನು ಮದ್ರಸಗಳಿಗೆ ಕಡ್ಡಾಯಗೊಳಿಸಿದೆ.

ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಎನ್ಐಒಎಸ್ ನ ನೂತನ ಪಠ್ಯಕ್ರಮವನ್ನು ಒಪ್ಪಿಕೊಳ್ಳಲು ಮುಸ್ಲಿಮ್ ಧರ್ಮಗುರುಗಳು ಈವರೆಗೆ ನಿರಾಕರಿಸಿದ್ದಾರೆ. ಮದ್ರಸಾ ಪಠ್ಯಕ್ರಮದ ಕುರಿತು ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಎನ್ಐಒಎಸ್ ಗೆ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಕಟ್ಟುನಿಟ್ಟಾಗಿ ಇಸ್ಲಾಮಿಕ್ ಶಿಕ್ಷಣವನ್ನು ನೀಡುವುದು ಮದ್ರಸಗಳ ಸ್ಥಾಪನೆಯ ಉದ್ದೇಶವಾಗಿದೆ ಎಂದು ಹೇಳಿದ 350 ವರ್ಷಗಳಷ್ಟು ಹಳೆಯದಾದ ಲಕ್ನೋದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ಫರಂಗಿ ಮಹಲ್ ನ ಅಧ್ಯಕ್ಷ ಹಾಗೂ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮೌಲಾನಾ ಖಾಲಿದ್ ರಶೀದ್ ಅವರು,ಮದ್ರಸ ಮಂಡಳಿಯ ಅಧೀನದಲ್ಲಿರುವ ಮದ್ರಸಗಳು ಮತ್ತು ಸಮುದಾಯವು ಖುದ್ದು ನಡೆಸುವ ಮದ್ರಸಗಳು;ಹೀಗೆ ಭಾರತದಲ್ಲಿ ಎರಡು ವಿಧಗಳ ಮದ್ರಸಗಳಿವೆ. 

ಮಂಡಳಿಯ ಅಧೀನದಲ್ಲಿರುವ ಮದ್ರಸಗಳು ಅದರ ನಿರ್ಣಯಗಳನ್ನು ಅನುಷ್ಠಾನಿಸಲು ಬದ್ಧವಾಗಿವೆ ಮತ್ತು ಇತರ ಮದ್ರಸಗಳು ತಮ್ಮದೇ ಆದ ನಿರ್ಧಾರಗಳನ್ನು ಕೈಗೊಳ್ಳಲು ಸ್ವತಂತ್ರವಾಗಿವೆ. ಸ್ವತಂತ್ರ ಮದ್ರಸಗಳಿಗೆ ಯಾವುದೇ ನಿರ್ದೇಶವನ್ನು ಹೊರಡಿಸುವ ಹಕ್ಕು ಎನ್ಐಒಎಸ್ಗೆ ಇಲ್ಲ ಎಂದು ಹೇಳಿದರು.

ಇನ್ನೋರ್ವ ಮುಸ್ಲಿಮ್ ಧರ್ಮಗುರು ಮೌಲಾನಾ ಯಾಸೂಬ್ ಅಬ್ಬಾಸ್ ಅವರೂ ಎನ್ಐಇಎಸ್ ನಿರ್ಧಾರವನ್ನು ಖಂಡಿಸಿದರು. ಗೀತೆ ಮತ್ತು ರಾಮಾಯಣವನ್ನು ಮದ್ರಸಗಳಲ್ಲಿ ಬೋಧಿಸಲು ಎನ್ಐಒಎಸ್ ಬಯಸಿದ್ದರೆ ಅದು ಆರೆಸ್ಸೆಸ್ ನಡೆಸುವ ಸರಸ್ವತಿ ಶಿಶು ಮಂದಿರದ ಪಠ್ಯಕ್ರಮದಲ್ಲಿ ಕುರ್ ಆನ್‌ ಅನ್ನು ಏಕೆ ಸೇರಿಸುತ್ತಿಲ್ಲ ಎಂದು ಪ್ರಶ್ನಿಸಿದರು. 

ಮದ್ರಸಗಳ ಮೇಲೆ ಏನನ್ನಾದರೂ ಹೇರಲು ಯಾರಾದರೂ ಪ್ರಯತ್ನಿಸಿದರೆ ಮುಸ್ಲಿಮ್ ಸಮುದಾಯವು ಅದನ್ನು ಪ್ರತಿಭಟಿಸುತ್ತದೆ ಎಂದ ಮದ್ರಸ ಸುಲ್ತಾನ್ ಅಲ್ ಮದಾರಿಸ್‌ ನ ಕಾರ್ಯಕಾರಿ ಸದಸ್ಯರಾಗಿರುವ ಅಬ್ಬಾಸ್, ಹಿಂದುಗಳು ಮತ್ತು ಮುಸ್ಲಿಮರು ಈ ದೇಶದ ಸ್ವಾತಂತ್ರಕ್ಕಾಗಿ ಒಂದಾಗಿ ಹೋರಾಡಿದ್ದಾರೆ, ಆದರೆ ಕೆಲವರು ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಮದ್ರಸ ವಿದ್ಯಾರ್ಥಿಗಳು ಪ್ರಾಚೀನ ಮಹಾಕಾವ್ಯಗಳನ್ನು ಕಲಿತರೆ ಹಾನಿಯೇನಿಲ್ಲ,ಆದರೆ ಸರಕಾರವು ಅದನ್ನು ಕಡ್ಡಾಯಗೊಳಿಸಿದರೆ ಸಮಸ್ಯೆಯಾಗುತ್ತದೆ ಎಂದು ಹೇಳಿದ ಖ್ಯಾತ ಶಿಕ್ಞಣ ತಜ್ಞ ಹಾಗೂ ಲಕ್ನೋ ವಿವಿಯ ಮಾನವಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ನದೀಂ ಹಸ್ನೈನ್ ಅವರು, ಎನ್ಐಒಎಸ್ ಶಾಲೆಗಳಲ್ಲಿ ಕುರ್‌ ಆನ್ ಮತ್ತು ನಹಜ್ ಅಲ್ ಬಲಗಾಹ್ ನಂತಹ ಇಸ್ಲಾಮಿಕ್ ಗ್ರಂಥಗಳನ್ನೂ ಬೋಧಿಸಬೇಕು ಎಂದರು.

ಸಮುದಾಯದ ಕೆಲವು ಹಿರಿಯರು ಸಹ ಎನ್ಐಒಎಸ್ ನ ಉದ್ದೇಶಗಳನ್ನು ಪ್ರಶ್ನಿಸಿದ್ದಾರೆ. ಎನ್ಐಒಎಸ್ ಇದೇ ನಿಯಮವನ್ನು ಆರೆಸ್ಸೆಸ್ ನಡೆಸುತ್ತಿರುವ ಶಾಲೆಗಳಲ್ಲಿಯೂ ಜಾರಿಗೆ ತಂದರೆ ನಿರ್ಧಾರವು ಒಳ್ಳೆಯದೇ ಎಂದ ನಿವೃತ್ತ ಕರ್ನಲ್ ಫಸಿಉದ್ದೀನ್ ಅಹ್ಮದ್ ಅವರು,ಮದ್ರಸ ವಿದ್ಯಾರ್ಥಿಗಳು ಭಗವದ್ಗೀತೆ ಮತ್ತು ರಾಮಾಯಣವನ್ನು ಕಲಿಯಬಹುದಾದರೆ ಸರಸ್ವತಿ ಶಿಶು ಮಂದಿರದ ವಿದ್ಯಾರ್ಥಿಗಳು ಕುರ್ಆನ್ ಮತ್ತು ಹದೀಸ್ ಅನ್ನು ಏಕೆ ಕಲಿಯಬಾರದು ಎಂದು ಪ್ರಶ್ನಿಸಿದರು.
 
ಕೆಲವು ಹಿರಿಯ ಅಧಿಕಾರಿಗಳು ತಮ್ಮ ರಾಜಕೀಯ ಧಣಿಗಳಿಂದ ಶಹಬ್ಬಾಸ್‌ ಗಿರಿ ಪಡೆಯಲು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ ಉರ್ದು ಸಾಪ್ತಾಹಿಕ ಜದೀದ್ ಮರ್ಕಝ್ ನ ಸ್ಥಾಪಕ ಸಂಪಾದಕ ಹಿಸಾಮ್ ಸಿದ್ದಿಕಿ ಅವರು, ಇಂಗ್ಲಿಷ್ ಮತ್ತು ಗಣಿತ ವಿಷಯಗಳನ್ನು ಬೋಧಿಸಬೇಕೆಂಬ ಸರಕಾರದ ಹಿಂದಿನ ಆದೇಶವನ್ನು ಮದ್ರಸಗಳು ಒಪ್ಪಿಕೊಂಡಿವೆ,ಆದರೆ ಗೀತೆ ಮತ್ತು ರಾಮಾಯಣ ಬೋಧನೆಯನ್ನು ಅನುಷ್ಠಾನಿಸುವುದು ಕಾನೂನುಬಾಹಿರವಾಗಿದೆ ಮತ್ತು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದರು.

ಎನ್ಐಒಎಸ್ 15 ಕೋರ್ಸ್ ಗಳನ್ನು ಸಿದ್ಧಪಡಿಸಿದ್ದು ಇವು ಪ್ರಾಥಮಿಕ ಶಿಕ್ಷಣದ 3,5 ಮತ್ತು 8ನೇ ತರಗತಿಗಳಿಗೆ ಸಮನಾಗಿವೆ.‘ಭಾರತೀಯ ಜ್ಞಾನ ಪರಂಪರಾ ’ ಇವುಗಳಲ್ಲಿ ಸೇರಿದ್ದು, ಇದು ರಾಮಾಯಣ, ಭಗವದ್ಗೀತೆ, ವೇದಗಳು, ಯೋಗ ವಿಜ್ಞಾನ, ವೃತ್ತಿಕೌಶಲ್ಯ, ಸಂಸ್ಕೃತ ಮತ್ತು ಪಾಣಿನಿ ಪ್ರತಿಪಾದಿಸಿರುವ ಮಹೇಶ್ವರ ಸೂತ್ರಗಳು ಇತ್ಯಾದಿಗಳ ಬೋಧನೆಯನ್ನು ಒಳಗೊಂಡಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News