1975ರ ತುರ್ತು ಪರಿಸ್ಥಿತಿ ಅಪ್ರಸ್ತುತ ವಿಷಯ, ಅದನ್ನು ಸಮಾಧಿ ಮಾಡಬೇಕು: ಸಂಜಯ್ ರಾವತ್

Update: 2021-03-07 18:28 GMT

ಮುಂಬೈ,ಮಾ.7: ಶಿವಸೇನೆ ನಾಯಕ ಸಂಜಯ್ ರಾವತ್ ಅವರು 1975ರ ತುರ್ತು ಸ್ಥಿತಿಯು ಹಳೆಯ,ಈಗ ಅಪ್ರಸ್ತುತವಾಗಿರುವ ವಿಷಯವಾಗಿದ್ದು,ಅದನ್ನು ಸಮಾಧಿ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರವನ್ನು ಗುರಿಯಾಗಿಸಿಕೊಂಡು ಅವರು, ದೇಶದಲ್ಲಿಯ ಹಾಲಿ ಸ್ಥಿತಿಯು ಹೇಗಿದೆಯೆಂದರೆ ತುರ್ತು ಸ್ಥಿತಿಯ ದಿನಗಳೇ ಚೆನ್ನಾಗಿದ್ದವು ಎಂದು ಯಾರೂ ಹೇಳಬಹುದು ಎಂದು ಕುಟುಕಿದ್ದಾರೆ.

ತನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತುಸ್ಥಿತಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಷಾದವನ್ನು ವ್ಯಕ್ತಪಡಿಸಿದ ನಡೆಯನ್ನು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿನ ತನ್ನ ಸಾಪ್ತಾಹಿಕ ಅಂಕಣ ‘ರೋಖಠೋಕ್’ನಲ್ಲಿ ಪ್ರಶ್ನಿಸಿರುವ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ರಾವುತ್,ತುರ್ತು ಸ್ಥಿತಿಯನ್ನು ಹೇರುವ ನಿರ್ಧಾರಕ್ಕಾಗಿ ಭಾರತೀಯರು ಇಂದಿರಾ ಗಾಂಧಿಯವರನ್ನು ದಂಡಿಸಿದ್ದಾರೆ,ಅವರಿಗೆ ಪಾಠವನ್ನೂ ಕಲಿಸಿದ್ದಾರೆ. ಆದರೆ ನಂತರ ಇಂದಿರಾರನ್ನು ಕ್ಷಮಿಸಿ ಮರಳಿ ಅಧಿಕಾರಕ್ಕೆ ತಂದಿದ್ದರು. ತುರ್ತು ಸ್ಥಿತಿ ಚರ್ವಿತಚರ್ವಣವಾಗಿರುವ ಹಳೆಯ ವಿಷಯ. ಅದನ್ನೇಕೆ ಮತ್ತೆ ಮತ್ತೆ ಕೆದಕುವುದು? ಆ ವಿಷಯವನ್ನು ಶಾಶ್ವತವಾಗಿ ಸಮಾಧಿ ಮಾಡಬೇಕು ಎಂದಿದ್ದಾರೆ.

ರಾಹುಲ್ ನೇರ ನಡೆಯ ಸರಳ ವ್ಯಕ್ತಿಯಾಗಿದ್ದು ಗತ ಘಟನೆಯ ಬಗ್ಗೆ ಅವರು ಸಾಂದರ್ಭಿಕವಾಗಿ ಮಾತನಾಡಿದ್ದರು. ಅವರ ಹೇಳಿಕೆಯು ಈ ವಿಷಯದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ. 1975ರ ತುರ್ತುಸ್ಥಿತಿಯನ್ನು ಅಭೂತಪೂರ್ವ ಸನ್ನಿವೇಶಗಳಲ್ಲಿ ಹೇರಲಾಗಿತ್ತು. ರಾಜಕೀಯ ಮತ್ತು ಮಾಧ್ಯಮಗಳಲ್ಲಿಯ ಈಗಿನ ಪೀಳಿಗೆಗೆ ಭೂತಕಾಲದ ಬಗ್ಗೆ ಅರಿವಿಲ್ಲ ಮತ್ತು ಅವರ ಮೇಲೆಂದೂ ಯಾವುದೇ ಪರಿಣಾಮವಾಗಿಲ್ಲ ಎಂದ ರಾವತ್, ದೇಶದಲ್ಲಿಯ ಪ್ರಚಲಿತ ಸ್ಥಿತಿ ಹೇಗಿದೆ ಎಂದರೆ 1975ರ ತುರ್ತುಸ್ಥಿತಿಯ ದಿನಗಳೇ ಚೆನ್ನಾಗಿದ್ದವು ಎಂದು ಯಾರೂ ಹೇಳಬಹುದು ಎಂದು ಹೇಳಿದ್ದಾರೆ.

ಚಿತ್ರ ನಿರ್ಮಾಪಕ-ನಿರ್ದೇಶಕ ಅನುರಾಗ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರು ಸರಕಾರದ ನೀತಿಗಳ ವಿರುದ್ಧ ಮಾತನಾಡಿದಾಗ ಅವರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗಳು ನಡೆದಿವೆ ಎಂದು ಬೆಟ್ಟು ಮಾಡಿರುವ ರಾವತ್, ವಾಷಿಂಗ್ಟನ್ ಪೋಸ್ಟ್ ದೇಶದ್ರೋಹ ಆರೋಪದಲ್ಲಿ ಹವಾಮಾನ ಕಾರ್ಯಕರ್ತೆ ದಿಶಾ ರವಿಯವರ ಬಂಧನವನ್ನು ಪ್ರಸ್ತಾಪಿಸಿ ಮೋದಿ ಸರಕಾರದಡಿ ‘ಅಘೋಷಿತ ತುರ್ತು ಸ್ಥಿತಿ’ಯನ್ನು ಪ್ರಶ್ನಿಸಿದೆ ಎಂದು ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಗಳ ಮೇಲೆ ನಿಯಂತ್ರಣ,ಚುನಾವಣೆಗಳನ್ನು ಗೆಲ್ಲು ಮತ್ತು ಪ್ರತಿಪಕ್ಷಗಳನ್ನು ಒಡೆಯಲು ರಾಜಕೀಯ ತಂತ್ರಗಳು, ಸಂವಿಧಾನದ ನಿಯಮಗಳ ಉಲ್ಲಂಘನೆಗಳು ಇವೆಲ್ಲವೂ ಈಗ 1975ರಲ್ಲಿ ಸಂಭವಿಸಿದ್ದ ರೀತಿಯಲ್ಲಿಯೇ ನಡೆಯುತ್ತಿವೆ. ವ್ಯತ್ಯಾಸವೆಂದರೆ ಇಂದಿರಾ ಗಾಂಧಿಯವರ ಜಾಗದಲ್ಲಿ ನರೇಂದ್ರ ಮೋದಿಯವರಿದ್ದಾರೆ ಎಂದು ರಾವುತ್ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News