ದೇಶದಲ್ಲಿ ಇರುವ ಏಕೈಕ ಸಿಂಡಿಕೇಟ್ ಪ್ರಧಾನಿ ಮೋದಿ-ಅಮಿತ್ ಶಾ: ಮಮತಾ ಬ್ಯಾನರ್ಜಿ

Update: 2021-03-08 04:23 GMT

ಸಿಲಿಗುರಿ : ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್, "ಸಿಂಡಿಕೇಟ್"ಗಳನ್ನು ಸಾಂಸ್ಥಿಕಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ದೇಶದಲ್ಲಿ ಇರುವ ಏಕೈಕ ಸಿಂಡಿಕೇಟ್ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರದ್ದು" ಎಂದು ವ್ಯಂಗ್ಯವಾಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಅಸ್ತಿತ್ವಕ್ಕಾಗಿ ನಡೆಯುವ ಸಮರ ಎಂದು ಬಣ್ಣಿಸಿದ ಅವರು, ಈ ಯುದ್ಧದಲ್ಲಿ ಗೆಲ್ಲಲು ನೆರವಾಗುವಂತೆ ನೇರಿದ್ದ ಬೃಹತ್ ಜನಸ್ತೋಮಕ್ಕೆ ಮನವಿ ಮಾಡಿದರು. "ನೀವು ನಮ್ಮ ಅಸ್ತಿತ್ವವನ್ನು ಖಾತರಿಪಡಿಸದಿದ್ದರೆ, ಮೋದಿ ಬಂಗಾಳವನ್ನು ವಿಭಜಿಸಿ ಚೂರು ಚೂರಾಗಿಸುತ್ತಾರೆ" ಎಂದು ಎಚ್ಚರಿಕೆ ನೀಡಿದರು.

ಪ್ರಧಾನಿ ಮೋದಿ ಅವರೇ ಆಯ್ಕೆ ಮಾಡುವ ಸಮಯ ಮತ್ತು ಸ್ಥಳದಲ್ಲಿ ಮುಖಾಮುಖಿ ಚರ್ಚೆಗೆ ಬರಲಿ ಎಂದು ಮಮತಾ ಸವಾಲು ಹಾಕಿದರು. "ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಅವರ ನಡವಳಿಕೆ ಪ್ರಧಾನಿ ಕುರ್ಚಿಯ ನಡವಳಿಕೆಯಲ್ಲ. ನನಗೆ ಸಮಯ ಮತ್ತು ದಿನಾಂಕ ಕೊಡಿ. ನಮ್ಮೊಂದಿಗೆ ಚರ್ಚೆಗೆ ಯಾವಾಗ ಬರುತ್ತೀರಿ ಎಂದು ಹೇಳಿ. ಖೇಲ್ ಹೋಬ್ (ಪಂದ್ಯ ನಡೆಯುತ್ತಿದೆ). ಜನರು ನ್ಯಾಯಾಧೀಶರಾಗುತ್ತಾರೆ" ಎಂದು ಹೇಳಿದರು.

10 ವರ್ಷದ ಟಿಎಂಸಿ ಆಡಳಿತದಲ್ಲಿ ಬಂಗಾಲ ಸುಲಿಗೆಕೋರರ ಮತ್ತು ಸಿಂಡಿಕೇಟ್‌ಗಳ ಭೂಮಿಯಾಗಿದೆ ಎಂದು ಆಪಾದಿಸಿದ ಮೋದಿ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ, "ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸಿಂಡಿಕೇಟ್ ಬಿಜೆಪಿಯ ಮಾತು ಕೂಡಾ ಕೇಳುತ್ತಿಲ್ಲ" ಎಂದು ಲೇವಡಿ ಮಾಡಿದರು. "ಪ್ರಧಾನಿಗಳೇ ನೀವು ಕೆಲಸಕ್ಕಾಗಿ ಎಂದೂ ಬಂಗಾಳಕ್ಕೆ ಬಂದಿಲ್ಲ. ನೀವು ಕಟ್ಟುಕಥೆ ಮತ್ತು ಸುಳ್ಳು ಹರಡಲು ಬಂದಿದ್ದೀರಿ" ಎಂದು ಆಪಾದಿಸಿದರು.

"ರಾಜಕೀಯ ಒತ್ತಡದಿಂದ ನೀವು ಬಂದಿರಬಹುದು. ಇಂದು ಕೂಡಾ ಬಂದಿದ್ದೀರಿ. ಆದರೆ ಪ್ರಚಾರಕ್ಕೆ ಮುನ್ನ, ಎಲ್‌ಪಿಜಿ ಸಿಲಿಂಡರ್ ಬೆಲೆ ಏಕೆ 900 ರೂ. ಆಗಿದೆ ಎನ್ನುವುದಕ್ಕೆ ವಿವರಣೆ ಕೊಡಿ. ಏಕೆ ಅಡುಗೆ ಮನೆ ಹೊತ್ತಿ ಉರಿಯುತ್ತಿದೆ ? ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏಕೆ ಪ್ರತಿದಿನ ಹೆಚ್ಚುತ್ತಿದೆ ? ಬಂಗಾಳ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಜನ ಅದನ್ನು ಬೇಯಿಸಲು 900 ರೂಪಾಯಿಯ ಸಿಲಿಂಡರ್ ಖರೀದಿಸಬೇಕು" ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News