ಬಾಟ್ಲಾ ಹೌಸ್ ಎನ್‍ಕೌಂಟರ್: ಬಂಧಿತ ಐಎಂ ಉಗ್ರ ಆರಿಝ್ ಖಾನ್ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ

Update: 2021-03-08 12:34 GMT

 ಹೊಸದಿಲ್ಲಿ: ರಾಜಧಾನಿಯಲ್ಲಿ 2008ರಲ್ಲಿ ನಡೆದ ಬಾಟ್ಲಾ ಹೌಸ್ ಶೂಟೌಟ್ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಆರಿಝ್ ಖಾನ್‍ ನನ್ನು ಇಂದು ಸ್ಥಳೀಯ ನ್ಯಾಯಾಲಯ ದೋಷಿಯೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮುಂದಿನ ಸೋಮವಾರ ಘೋಷಿಸಲಿದೆ.

ರಾಜಧಾನಿಯ ಒಖ್ಲಾ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಉಗ್ರರ ತಂಡ ಹಾಗೂ ದಿಲ್ಲಿ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದರೆ ಇಬ್ಬರು ಇತರರು ಗಾಯಗೊಂಡಿದ್ದರು. ಘಟನೆ ಸಂದರ್ಭ ಆರಿಝ್ ಖಾನ್ ತಪ್ಪಿಸಿಕೊಂಡಿದ್ದ. ದಿಲ್ಲಿ, ರಾಜಸ್ಥಾನ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ 2008ರಲ್ಲಿ ನಡೆದಿದ್ದ ಸರಣಿ ಸ್ಫೋಟ ಪ್ರಕರಣಗಳಲ್ಲೂ ಆತ ಆರೋಪಿಯಾಗಿದ್ದ.

ಉತ್ತರ ಪ್ರದೇಶದ ಆಝಂಘರ್ ನಿವಾಸಿಯಾಗಿರುವ ಆರಿಝ್ ಖಾನ್‍ನನ್ನು ದಿಲ್ಲಿ ಪೊಲೀಸರ ವಿಶೇಷ ಸೆಲ್ ಫೆಬ್ರವರಿ 2018ರಲ್ಲಿ ಬಂಧಿಸಿತ್ತು. ಇದಕ್ಕೂ ಮುಂಚೆ ಆತನ ಸುಳಿವು ನೀಡಿದವರಿಗೆ ರೂ. 15 ಲಕ್ಷ ಬಹುಮಾನ ಘೋಷಿಸಲಾಗಿತ್ತಲ್ಲದೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು.

ಮುಝಫ್ಫರನಗರದ ಎಸ್ ಡಿ ಕಾಲೇಜಿನ ಬಿಟೆಕ್ ಪದವೀಧರನಾಗಿರುವ ಖಾನ್ ಸ್ಫೋಟಕ ತಜ್ಞನಾಗಿದ್ದಾನೆ. ದಿಲ್ಲಿ ಶೂಟೌಟ್‍ನಲ್ಲಿ ಮೃತಪಟ್ಟಿದ್ದ ಆತಿಫ್ ಅಮೀನ್ ಎಂಬಾತ ಈತನನ್ನು ಉಗ್ರ ಸಂಘಟನೆಗೆ ಸೇರಿಸಿಕೊಂಡಿದ್ದ. 2008 ಘಟನೆ ನಂತರ ಆತ ನೇಪಾಳಕ್ಕೆ ತೆರಳಿ ಅಲ್ಲಿನ ಪಾಸ್‍ಪೋರ್ಟ್ ಅನ್ನು ಸಲೀಂ ಎಂಬ ಹೆಸರಿನಲ್ಲಿ ಪಡೆದುಕೊಂಡು ಅಲ್ಲಿ ರೆಸ್ಟಾರೆಂಟ್ ಒಂದನ್ನು ನಡೆಸುತ್ತಿದ್ದನಲ್ಲದೆ ವಿದ್ಯಾರ್ಥಿಗಳಿಗೆ ಶಿಕ್ಷಣ ಕೂಡ ನೀಡುತ್ತಿದ್ದ. ನೇಪಾಳದಲ್ಲಿ ಆತನಿಗೆ ರಿಯಾಝ್ ಭಟ್ಕಳನ ಪರಿಚಯವಾದ ನಂತರ ಆತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಮರು ಆರಂಭಿಸುವಂತೆ ಖಾನ್‍ನಿಗೆ ಪ್ರೇರೇಪಿಸಿದ್ದ. ಮುಂದೆ ಸೌದಿಗೆ ತೆರಳಿದ್ದ ಖಾನ್ ಫೆಬ್ರವರಿ 2018ರಲ್ಲಿ ಭಾರತಕ್ಕೆ ಬಂದಿದ್ದ ವೇಳೆ ಭಾರತ-ಗಡಿಯಲ್ಲಿ ಬಂಧಿತನಾಗಿದ್ದ ಎನ್ನಲಾಗಿದೆ.

ಬಾಟ್ಲಾ ಹೌಸ್ ಪ್ರಕರಣದ ಇನ್ನೊಬ್ಬ ಆರೋಪಿ ಶಹಝಾದ್ ಅಹ್ಮದ್ ಎಂಬಾತನನ್ನು ಅಪರಾಧಿ ಎಂದು 2013ರಲ್ಲಿ ಘೋಷಿಸಲಾಗಿತ್ತು. ಇನ್ನಿಬ್ಬರು ಆರೋಪಿಗಳಾದ ಆತಿಫ್ ಅಮೀನ್ ಹಾಗೂ ಮುಹಮ್ಮದ್ ಸಾಜಿದ್ ಘಟನೆ ಸಂದರ್ಭ ಹತ್ಯೆಗೀಡಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News