ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ʼಸಿಎಂ ಪಿಣರಾಯಿ ವಿಜಯನ್‌ʼ ಹೆಸರನ್ನು ಹೇಳುವಂತೆ ಆರೋಪಿಗೆ ಒತ್ತಡ ಹೇರಲಾಗಿತ್ತು: ವರದಿ

Update: 2021-03-08 18:28 GMT

ಕೇರಳದ ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಗೆ ʼಸಿಎಂ ಪಿಣರಾಯಿ ವಿಜಯನ್" ಹೆಸರನ್ನು ಉಲ್ಲೇಖಿಸುವಂತೆ ಒತ್ತಡ ಹೇರಲಾಗಿತ್ತು ಎಂದು ಪೊಲೀಸ್ ಬೆಂಗಾವಲು ಅಧಿಕಾರಿಯೋರ್ವರು ಹೇಳಿಕೆ ನೀಡಿದ್ದಾಗಿ indiatoday.in ವರದಿ ಮಾಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿದ್ದು, ಈ ನಡುವೆ ಚಿನ್ನ ಕಳ್ಳಸಾಗಣೆ ಪ್ರಕರಣವು ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ.

ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಆರೋಪಿ ಸ್ವಪ್ನಾ ಸುರೇಶ್ ಕೇರಳ ಸಿಎಂ ಪಿಣರಾಯಿ ವಿಜಯನ್ ರನ್ನು ಹೆಸರಿಸಿದ್ದಾರೆ ಎಂದು ಈ ತಿಂಗಳ ಆರಂಭದಲ್ಲಿ ಕಸ್ಟಮ್ಸ್ ಇಲಾಖೆ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಕೇಂದ್ರ ತನಿಖಾ ಸಂಸ್ಥೆಗಳು 'ಸ್ವಯಂಪ್ರೇರಣೆಯಿಂದ' ಚುನಾವಣಾ ಪ್ರಚಾರವನ್ನು ಕೈಗೆತ್ತಿಕೊಂಡಿವೆ ಎಂದು ಆರೋಪಿಸಿ ವಿಜಯನ್ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು.

ಸದ್ಯ, ಸ್ವಪ್ನಾ ಸುರೇಶ್ ಅವರ ರಕ್ಷಣಾತ್ಮಕ ವಿವರಗಳಿಗೆ ನಿಯೋಜಿಸಲಾದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೆಲವು ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ. ವಿಚಾರಣೆಯ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ರ ಹೆಸರಿಸಲು ಸ್ವಪ್ನಾ ಸುರೇಶ್ ಅವರನ್ನು 'ಇಡಿʼ ಬಲವಂತವಾಗಿ ಒತ್ತಾಯಿಸಿತ್ತು ಎಂದು ಕೈಬರಹದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಆಡಿಯೋ ಕ್ಲಿಪ್‌ನ ಮೂಲದ ಕುರಿತಾದ ತನಿಖೆಗೆ ಸಂಬಂಧಿಸಿದಂತೆ ಪೊಲೀಸ್ ಬೆಂಗಾವಲು ಅಧಿಕಾರಿಯ ಹೇಳಿಕೆಯನ್ನು ದಾಖಲಿಸಲಾಗಿದೆ. ಇದರಲ್ಲಿ ಸ್ವಪ್ನಾ ಸುರೇಶ್ ಅವರು ಸಿಎಂ ವಿಜಯನ್ ಅವರ ಹೆಸರನ್ನು ಉಲ್ಲೇಖಿಸಲು ಒತ್ತಾಯಿಸುವ ಕುರಿತಾದಂತೆ ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ.

ಆದರೆ, ಉದ್ದೇಶಿತ ಆಡಿಯೊ ಕ್ಲಿಪ್‌ನಲ್ಲಿ ಸ್ವಪ್ನಾ ಸುರೇಶ್ ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ಆಕೆಗೆ ತಿಳಿದಿಲ್ಲ ಎಂದು ಪೊಲೀಸ್ ಬೆಂಗಾವಲು ಅಧಿಕಾರಿಯೋರ್ವರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News