ಮೆಹಬೂಬಾ ಮುಫ್ತಿ ಪಾಸ್‌ಪೋರ್ಟ್ ಪ್ರಕರಣ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
Update: 2021-03-09 22:27 IST
ಜಮ್ಮು ಕಾಶ್ಮೀರ, ಮಾ. 9: ತನಗೆ ಪಾಸ್‌ಪೋರ್ಟ್ ಮಂಜೂರು ಮಾಡಲು ಸರಕಾರ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಪಿಡಿಪಿ ಅಧ್ಯಕ್ಷೆ ಹಾಗೂ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಲ್ಲಿಸಿದ ಮನವಿಗೆ ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯ ಸೋಮವಾರ ಕೇಂದ್ರ ಸರಕಾರ, ಜಮ್ಮು ಹಾಗೂ ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪ್ರತಿಕ್ರಿಯೆ ಕೋರಿದೆ.
ಕೇಂದ್ರ ಸರಕಾರದ ಮಾರ್ಗಸೂಚಿ ನಿಗದಿಪಡಿಸಿದ ಗಡುವಿನ ಒಳಗೆ ಪಾಸ್‌ಪೋರ್ಟ್ ಅರ್ಜಿಯ ಪ್ರಕ್ರಿಯೆ ನಡೆಸಲು ಪ್ರಾಧಿಕಾರ ವಿಫಲವಾಗಿದೆ. ಇದಕ್ಕೆ ಪೊಲೀಸ್ ಪರಿಶೀಲನೆಯ ಕಾರಣ ನೀಡಲಾಗಿದೆ ಎಂದು ಆರೋಪಿಸಿ ಮುಫ್ತಿ ಅವರು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆದಾರರಿಗೆ ನ್ಯಾಯಮೂರ್ತಿ ಅಲಿ ಮುಹಮ್ಮದ್ ಅವರ ಏಕ ಸದಸ್ಯ ಪೀಠ ನೋಟಿಸು ಜಾರಿ ಮಾಡಿದೆ.