ಸಿಪಿಎಂ ಟಿಕೆಟ್‍ನಲ್ಲಿ ಸ್ಪರ್ಧಿಸಲಿರುವ ಜೆಎನ್‍ಯು ವಿದ್ಯಾರ್ಥಿ ನಾಯಕಿ
ಹೊಸದಿಲ್ಲಿ: ಜವಾಹರಲಾಲ್ ನೆಹರೂ ವಿವಿಯಲ್ಲಿ ಕಳೆದ ವರ್ಷ ಶುಲ್ಕ ಹೆಚ್ಚಳ ವಿರೋಧಿಸಿ ನಡೆದ ಚಳವಳಿಯ ವೇಳೆ ಹಣೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದ ಈ ವಿದ್ಯಾರ್ಥಿ ನಾಯಕಿಯ ಚಿತ್ರ ವೈರಲ್ ಆಗಿತ್ತು. ಇದೀಗ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಷ್ ಘೋಷ್ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಿಪಿಎಂ ಟಿಕೆಟ್‍ನಲ್ಲಿ ಸ್ಪರ್ಧಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಜಮೂರಿಯಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಘೋಷ್ (25) ಜವಾಹರಲಾಲ್ ನೆಹರೂ ವಿವಿಯ ಸ್ಕೂಲ್ ಆಫ್ ಇಂಟರ್‍ನ್ಯಾಷನಲ್ ರಿಲೇಶನ್ಸ್‍ನಲ್ಲಿ ಎಂಫಿಲ್/ಪಿಎಚ್‍ಡಿ ಪದವಿ ಅಧ್ಯಯನ ಮಾಡುತ್ತಿದ್ದಾರೆ. ಮೂಲತಃ ಘೋಷ್ ಪಶ್ಚಿಮ ಬಂಗಾಳದ ದುರ್ಗಾಪುರದವರು.
ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ ಜೆಎನ್‍ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರ ಪಟ್ಟಿಗೆ ಘೋಷ್ ಹೊಸ ಸೇರ್ಪಡೆ. ಇದಕ್ಕೂ ಮುನ್ನ ಡಿ.ಪಿ.ತ್ರಿಪಾಠಿ, ಪ್ರಕಾಶ್ ಕಾರಟ್, ಸೀತಾರಾಂ ಯಚೂರಿ, ಚಂದ್ರಶೇಖರ ಪ್ರಸಾದ್, ಶಕೀಲ್ ಅಹ್ಮದ್ ಖಾನ್, ತನ್ವೀರ್ ಅಖ್ತರ್ ಮತ್ತು ಕನ್ಹಯ್ಯಾ ಕುಮಾರ್ ವಿದ್ಯಾರ್ಥಿ ಸಂಘದ ನಾಯಕರಾಗಿ, ಬಳಿಕ ರಾಜಕಾರಣದಲ್ಲಿ ಹೆಸರು ಮಾಡಿದ್ದಾರೆ. ಎನ್‍ಎಸ್‍ಯುಐ ಅಭ್ಯರ್ಥಿಯಾಗಿ ತನ್ವೀರ್ ಜಯ ಗಳಿಸಿದ್ದನ್ನು ಹೊರತುಪಡಿಸಿದರೆ, ಉಳಿದೆಲ್ಲರೂ ಎಡರಂಗದ ವಿದ್ಯಾರ್ಥಿ ಸಂಘಟನೆಗಳ ಹಿನ್ನೆಲೆಯವರು.
ಘೋಷ್ ಚುನಾವಣಾ ಕಣಕ್ಕೆ ಧುಮುಕುತ್ತಿರುವ ಮೊಟ್ಟಮೊದಲ ಜೆಎನ್‍ಯು ವಿದ್ಯಾರ್ಥಿ ಸಂಘದ ಹಾಲಿ ಅಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಎಸ್‍ಎಫ್‍ಐ ಸದಸ್ಯೆಯಾಗಿರುವ ಇವರು, 2019ರಲ್ಲಿ ಜೆಎನ್‍ಯುಎಸ್‍ಯು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಮೂಲಕ 13 ವರ್ಷ ಬಳಿಕ ಎಸ್‍ಎಫ್‍ಐಗೆ ಈ ಅತ್ಯುನ್ನತ ಹುದ್ದೆ ದಕ್ಕಲು ಕಾರಣರಾಗಿದ್ದರು. ದೆಹಲಿ ವಿವಿಯ ದೌಲತ್‍ರಾಂ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದ ಘೋಷ್, ಕಾಲೇಜು ದಿನಗಳಿಂದಲೇ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಸ್ನಾತಕೋತ್ತರ ಪದವಿಗಾಗಿ ಅವರು ಬಳಿಕ ಜೆಎನ್‍ಯುಗೆ ತೆರಳಿದರು.