×
Ad

75 ರಿಂದ 27: ಕೇರಳ ಸಿಪಿಎಂ ಅಭ್ಯರ್ಥಿಗಳ ಪಟ್ಟಿಯ ವಿಶೇಷವೇನು ಗೊತ್ತೇ?

Update: 2021-03-11 10:02 IST
ಪಿಣರಾಯಿ ವಿಜಯನ್

ತಿರುವನಂತಪುರ: ಆಡಳಿತಾರೂಢ ಎಡರಂಗದ ಪ್ರಮುಖ ಪಾಲುದಾರ ಪಕ್ಷವಾಗಿರುವ ಸಿಪಿಎಂ ಬುಧವಾರ 83 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಪಕ್ಷದ ರಾಜ್ಯ ಸಮಿತಿ ಅಂತಿಮಪಡಿಸಿದ ಪಟ್ಟಿಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಇಲ್ಲ.

ಟಿಕೆಟ್‌ಗಾಗಿ ದೊಡ್ಡ ರಾಜಕೀಯ ಪ್ರಹಸನ ನಡೆದಿದ್ದ ಪೊನ್ನಣಿ ಮತ್ತು ಕುಟ್ಟಿಯಾಡಿ ಕ್ಷೇತ್ರಗಳಲ್ಲಿ ಯಾವುದೇ ಒತ್ತಡಕ್ಕೆ ಪಕ್ಷ ಮಣಿದಿಲ್ಲ. ಈ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸುವಂತೆ ಬಲವಾದ ಆಗ್ರಹ ಕೇಳಿಬಂದಿತ್ತು ಹಾಗೂ ಕೆಲ ಮುಖಂಡರು ರಾಜೀನಾಮೆಯನ್ನೂ ನೀಡಿದ್ದರು. ಆದರೆ ಮಂಜೇಶ್ವರ ಕ್ಷೇತ್ರದಲ್ಲಿ ಕೆ.ಆರ್.ಜಯಾನಂದ ಅವರ ಉಮೇದುವಾರಿಕೆ ಬಗ್ಗೆ ಮರು ಪರಿಶೀಲನೆ ನಡೆಸುವುದಾಗಿ ಹೇಳಿದೆ.

ದೇವಿಕುಲಂ ಹಾಗೂ ಮಂಜೇಶ್ವರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಪಡಿಸಿದಲ್ಲಿ ಒಂಬತ್ತು ಮಂದಿ ಸಿಪಿಎಂ ಬೆಂಬಲಿತ ಪಕ್ಷೇತರರು ಸೇರಿದಂತೆ 85 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗುತ್ತದೆ. 140 ಸದಸ್ಯ ಬಲದ ವಿಧಾನಸಭೆಯ ಉಳಿದ 55 ಕ್ಷೇತ್ರಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಾಗಿದೆ.

ಬುಧವಾರ ಪ್ರಕಟಿಸಲಾದ ಪಟ್ಟಿಯಲ್ಲಿ ನಾಲ್ಕು ತಲೆಮಾರುಗಳ ಅಭ್ಯರ್ಥಿಗಳು ಸೇರಿದ್ದು, 75 ವರ್ಷದ ಸಿಎಂ ಪಿಣರಾಯಿ ವಿಜಯನ್ ಅವರಿಂದ ಹಿಡಿದು 27 ವರ್ಷ ವಯಸ್ಸಿನ ಎಸ್‌ಎಫ್‌ಐ ಸದಸ್ಯ ಸಚಿನ್ ದೇವ್ ಹೆಸರುಗಳನ್ನು ಒಳಗೊಂಡಿದೆ.

12 ಮಂದಿ ಅಭ್ಯರ್ಥಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 12 ಮಂದಿ ಮಹಿಳೆಯರು ಕೂಡಾ ಈ ಬಾರಿ ಅವಕಾಶ ಪಡೆದಿದ್ದಾರೆ. 2016ರ ಚುನಾವಣೆಯಲ್ಲೂ ಇಷ್ಟೇ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕೆ ಇಳಿಸಿತ್ತು. ವಿಜಯನ್ ಧರ್ಮದಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಸಚಿವರಾದ ಕೆ.ಕೆ.ಶೈಲಜಾ (ಮಟ್ಟನೂರು), ಟಿ.ಪಿ.ರಾಮಕೃಷ್ಣ (ಪೆರಂಬ್ರಾ), ಎಂ.ಎಂ.ಮಣಿ (ಉದುಂಬಂಚೋಲ), ಕಡಕ್ಕಪಲ್ಲಿ ಸುಂದರನ್ (ಕಳಕ್ಕೂಟಂ), ಮರ್ಸಿಕುಟ್ಟಿ ಅಮ್ಮಾ (ಕುಂದರ) ಎ.ಸಿ.ಮೊಯಿದ್ದೀನ್ (ಕನ್ನಂಕುಲಂ) ಹಾಗೂ ಕೆ.ಟಿ.ಜಲೀಲ್ (ತವನೂರು) ಕೂಡಾ ಪಟ್ಟಿಯಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News