×
Ad

ಕೋಲ್ಕತಾದ ಆಸ್ಪತ್ರೆಗೆ ದಾಖಲಾದ ಮಮತಾ ಬ್ಯಾನರ್ಜಿ

Update: 2021-03-11 10:53 IST

Photo source: (Twitter/@abhishekaitc)
 

ಕೋಲ್ಕತಾ: ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ತೆರಳಿದ್ದಾಗ 4-5  ಜನರಿಂದ ದಾಳಿಗೊಳಗಾಗಿ ಗಾಯಗೊಂಡಿದ್ದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಬುಧವಾರ ರಾತ್ರಿಯೇ ಎಸ್ ಎಸ್ ಕೆ ಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಮತಾ ಅವರ  ಪಾದ ಹಾಗೂ ಭುಜದ ಮೂಳೆಗೆ ಗಾಯವಾಗಿದ್ದು, 48 ಗಂಟೆಗಳ ಕಾಲ ಅವರ ಮೇಲೆ ನಿಗಾ ಇರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ಆರಂಭಿಕ ಪರೀಕ್ಷೆಯಲ್ಲಿ ಮಮತಾ ಅವರ ಎಡ ಪಾದ, ಕಾಲು ಹಾಗೂ ಮೂಗಿನಲ್ಲಿ ತೀವ್ರವಾದ ಎಲುಬಿನ ಗಾಯಗಳು, ಬಲ ಭುಜ, ಮುಂಗೈ ಹಾಗೂ ಕುತ್ತಿಗೆಯಲ್ಲಿ ಗಾಯಗಳಾಗಿವೆ. ಘಟನೆಯ ನಂತರ ಮುಖ್ಯಮಂತ್ರಿ ಮಮತಾ ಅವರು ಎದೆನೋವು ಹಾಗೂ ಉಸಿರಾಟದ ಕುರಿತು ದೂರು ನೀಡಿದ್ದಾರೆ. ಅವರನ್ನು 48 ಗಂಟೆಗಳ ಕಾಲ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಐಪಿಜಿಎಂಇಆರ್ ಹಾಗೂ ಎಸ್‍ಎಸ್ ಕೆಎಂ ಆಸ್ಪತ್ರೆಯ ಡಾ. ಬಂಡೋಪಧ್ಯಾಯ ತಿಳಿಸಿದ್ದಾರೆ.

ಮಮತಾ ಅವರಿಗೆ ಗುರುವಾರ ಬೆಳಗ್ಗೆ ಸಿಟಿ ಸ್ಕ್ಯಾನಿಂಗ್ ನಡೆಸಲಾಗುವುದು. ಮಮತಾ ಅವರ ಪಾದ ಹಾಗೂ ಕಾಲ್ಬೆರಳ ಮುರಿತಕ್ಕೊಳಗಾಗಿದ್ದಾರೆ. 

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಗೆ ಸ್ವಲ್ಪ ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಯ ವಿವಿಐಪಿ ವುಡ್ ಬರ್ನ್ ಬ್ಲಾಕ್ ನಲ್ಲಿರುವ ವಿಶೇಷ ವಾರ್ಡ್‍ಗೆ ವರ್ಗಾಯಿಸಲಾಗಿದೆ. 

ಹೆಚ್ಚಿನ ಪರೀಕ್ಷೆಗಳನ್ನು ಮಾಡಬೇಕಾಗಿದೆ. ಅವರ ಸ್ಥಿತಿಯನ್ನು ಪರಿಶೀಲಿಸಿದ ನಂತರ ನಮ್ಮ ಮುಂದಿನ ಚಿಕಿತ್ಸೆಯ ಕೋರ್ಸ್ ಅನ್ನು ನಾವು ನಿರ್ಧರಿಸುತ್ತೇವೆ ಎಂದು ಮಮತಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ತಂಡದ ವೈದ್ಯರು ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಯ ಬೆಡ್ ಮೇಲೆ ಎಡಗಾಲಿಗೆ ಹಾಕಿರುವ ಬ್ಯಾಂಡೇಜ್‍ನೊಂದಿಗೆ ಮಲಗಿರುವ ಫೋಟೊವನ್ನು ಮಮತಾ ಅವರ ಅಳಿಯ, ಸಂಸದ ಅಭಿಷೇಕ್ ಬ್ಯಾನರ್ಜಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ದೀದಿ ಬೇಗನೆ ಚೇತರಿಸಿಕೊಳ್ಳಲಿ ಎಂದು ಪಕ್ಷದ ಅಭಿಮಾನಿಗಳು ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News