"ನನ್ನ ಮೇಲೆ ದಾಳಿಯಾಗಿದೆ ಎಂದು ಮಮತಾ ಸುಳ್ಳು ಹರಡುತ್ತಿದ್ದಾರೆ": ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ
ಹೊಸದಿಲ್ಲಿ: ತಮ್ಮ ಮೇಲೆ ನಂದಿಗ್ರಾಮದಲ್ಲಿ ಬುಧವಾರ ಸಂಜೆ ದಾಳಿಯಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮಾಡಿರುವ ಆರೋಪದ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. "ಮಮತಾ ಅವರು ರಾಜಕೀಯಕ್ಕಾಗಿ ದಾಳಿ ನಡೆದಿದೆ ಎಂದು ಸುಳ್ಳು ಹರಡುತ್ತಿದ್ದಾರೆ" ಎಂದು ಬಿಜೆಪಿ ಆರೋಪಿಸಿದೆ. ನಡೆದಿದೆಯೆನ್ನಲಾದ ದಾಳಿಯ ವೇಳೆ ಉಂಟಾಗಿರುವ ಗಾಯಗಳಿಗೆ ಸದ್ಯ ಮಮತಾ ಕೊಲ್ಕತ್ತಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೆಪಿ ನಾಯಕರ ಒಂದು ನಿಯೋಗ ಇಂದು ಕೊಲ್ಕತ್ತಾದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಮುಖ್ಯಮಂತ್ರಿಯ ವಿರುದ್ಧ ದೂರಿ ಆಕೆಯ ಆರೋಪದ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದೆ.
"ಈ ದಾಳಿ ಹೇಗಾಯಿತು, ಯಾರು ಕಾರಣ ಎಂದು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಮನವಿ ಮಾಡುತ್ತೇವೆ. ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಅಮಾನತಿಗೆ ನಾವು ಆಗ್ರಹಿಸುತ್ತೇವೆ" ಎಂದು ಬಂಗಾಳ ಬಿಜೆಪಿ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ಹೇಳಿದ್ದಾರೆ.
ತರುವಾಯ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷದ ನಿಯೋಗ ಕೂಡ ಚುನಾವಣಾ ಆಯೋಗವನ್ನು ಭೇಟಿಯಾಗಿ ದಾಳಿಯ ಕುರಿತು ದೂರು ಸಲ್ಲಿಸಿದೆ ಎಂದು ತಿಳಿದು ಬಂದಿದೆ.