×
Ad

ಭಾರತಕ್ಕೆ ಮರಳಿ ಐದು ವರ್ಷಗಳ ಬಳಿಕ ತನ್ನ ಹೆತ್ತ ತಾಯಿಯ ಜೊತೆ ಸೇರಿದ ಗೀತಾ

Update: 2021-03-11 15:43 IST

ಮುಂಬೈ: ಹನ್ನೊಂದು-ಹನ್ನೆರಡು ವರ್ಷದವಳಿರುವಾಗ ಆಕಸ್ಮತ್ತಾಗಿ ಭಾರತದ ಗಡಿ ದಾಟಿ ಪಾಕಿಸ್ತಾನ ಪ್ರವೇಶಿಸಿ ಅಲ್ಲಿನ ಕರಾಚಿ ರೈಲು ನಿಲ್ದಾಣದಲ್ಲಿ ಕಂಡು ಬಂದು ಅಲ್ಲಿ ಟ್ರಸ್ಟ್ ಒಂದನ್ನು ನಡೆಸುತ್ತಿರುವ ಮುಸ್ಲಿಂ ಕುಟುಂಬದ ಆಶ್ರಯ ಪಡೆದು ಕೊನೆಗೆ 2015ರಲ್ಲಿ ಭಾರತಕ್ಕೆ ಕಳುಹಿಸಲ್ಪಟ್ಟಿದ್ದ ಮೂಗ ಮತ್ತು ಕಿವುಡ ಯುವತಿ ಗೀತಾ ಕೊನೆಗೂ ಮಹಾರಾಷ್ಟ್ರದಲ್ಲಿ ತನಗೆ ಜನ್ಮ ನೀಡಿದ ತಾಯಿಯ ಬಳಿ ಸೇರಿದ್ದಾಳೆ.

ಈ ಕುರಿತು ಆಕೆಗೆ ಪಾಕಿಸ್ತಾನದಲ್ಲಿ ಆಶ್ರಯ ನೀಡಿದ್ದ ಈಧಿ ವೆಲ್ಫೇರ್ ಟ್ರಸ್ಟಿನ ಬಿಲ್ಖೀಸ್ ಈಧಿ ಮಾಹಿತಿ ನೀಡಿದ್ದಾರೆ. ಯುವತಿಯ ನಿಜನಾಮಧೇಯ ರಾಧಾ ವಾಘ್ಮರೆಯಾಗಿದ್ದು ಆಕೆಯ ತಾಯಿ ಮಹಾರಾಷ್ಟ್ರದ ನೈಗಾಂವ್ ಗ್ರಾಮದಲ್ಲಿ ಆಕೆಗೆ ದೊರಕಿದ್ದಾರೆ ಎಂದು ಬಿಲ್ಖೀಸ್ ತಿಳಿಸಿದ್ದಾರೆ.

ಹಲವಾರು ವರ್ಷಗಳ ಹಿಂದೆ ಕರಾಚಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಹುಡುಗಿಯನ್ನು ಬಿಲ್ಖೀಸ್ ಅವರ ಟ್ರಸ್ಟ್ ನಡೆಸುವ ಈಧಿ ಸೆಂಟರ್‍ನಲ್ಲಿ  ಆಶ್ರಯ ನೀಡಿ ಆಕೆಗೆ ಫಾತಿಮಾ ಎಂಬ ಹೆಸರಿಡಲಾಗಿತ್ತು. ಮುಂದೆ ಆಕೆ ಹಿಂದೂ ಧರ್ಮೀಯಳು ಎಂದು ತಿಳಿದ ನಂತರ ಆಕೆಗೆ ಗೀತಾ ಎಂಬ ಹೆಸರಿಡಲಾಗಿತ್ತು ಎಂದು ಬಿಲ್ಖೀಸ್ ತಿಳಿಸಿದ್ದಾರೆ.

2015ರಲ್ಲಿ ಗೀತಾಳ ಪ್ರಕರಣ ಸುದ್ದಿಯಾದಾಗ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಆಕೆಯನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಿದ್ದರು.

ಗೀತಾ ಈಗ ನೈಗಾಂವ್ ಗ್ರಾಮದಲ್ಲಿ ತನ್ನ ತಾಯಿ ಹಾಗೂ ಕುಟುಂಬದೊಂದಿಗೆ ಇದ್ದಾಳೆ. ಆಕೆಯ ತಂದೆ ಕೆಲ ವರ್ಷಗಳ ಹಿಂದೆ ತೀರಿಕೊಂಡ ನಂತರ ಆಕೆಯ ತಾಯಿ ಮರುವಿವಾಹವಾಗಿದ್ದಾರೆ ಎಂದು ಬಿಲ್ಖೀಸ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಪರ್ಭನಿ ಎಂಬಲ್ಲಿ ಗೀತಾಗೆ ಪಹಲ್ ಎಂಬ ಎನ್‍ಜಿಒ ಸಂಜ್ಞೆ ಭಾಷೆಯಲ್ಲಿ ತರಬೇತಿ ನೀಡುತ್ತಿದೆ. ಗೀತಾಳನ್ನು ಇಂದೋರ್ ಮೂಲದ ಎನ್‍ಜಿಒ ಆನಂದ್ ಸರ್ವಿಸಸ್ ಸೊಸೈಟಿಗೆ ಜುಲೈ 2020ರಲ್ಲಿ ಹಸ್ತಾಂತರಿಸಲಾಗಿತ್ತು  ಹಾಗೂ ಆ ಸಂಘಟನೆಯ  ಗ್ಯಾನೇಂದ್ರ ಪುರೋಹಿತ್ ಎಂಬವರು ಕಳೆದ ಡಿಸೆಂಬರಿನಲ್ಲಿ ಪರ್ಭನಿಗೆ ಬಂದಿದ್ದರು.  ಆಕೆಯ ರಕ್ತ ಸಂಬಂಧಿಗಳೆಂದು ಹೇಳಿಕೊಂಡ ಉತ್ತರ ಪ್ರದೇಶ, ಬಿಹಾರ, ತೆಲಂಗಾಣ ಮತ್ತು ರಾಜಸ್ಥಾನದ ಕನಿಷ್ಠ ಒಂದು ಡಜನ್ ಕುಟುಂಬಗಳ ಬಗ್ಗೆ ವಿಚಾರಿಸಲಾಗಿತ್ತು ಹಾಗೂ  ಅಂತಿಮವಾಗಿ  ಪರ್ಭಾನಿ ಜಿಲ್ಲೆಯ ಜಿಂಟೂರ್ ಎಂಬಲ್ಲಿ ವಾಸವಾಗಿದ್ದ ಮೀನಾ ವಾಘ್ಮರೆ (71) ಅವರ ಮಗಳು ರಾಧಾ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿತ್ತು. ತನ್ನ ಪುತ್ರಿಯ ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯವಿತ್ತು ಎಂದು ಮೀನಾ ಹೇಳಿದ್ದರು ಹಾಗೂ ಗೀತಾಳನ್ನು ಪರಿಶೀಲಿಸಿದಾಗ  ಮೀನಾ  ಆಕೆಯ ತಾಯಿ ಎಂಬುದು ದೃಢಪಟ್ಟಿತ್ತು.

"ಗೀತಾಳ ತಂದೆ ಸುಧಾಕರ್ ವಾಘ್ಮರೆ ಕೆಲ ವರ್ಷಗಳ ಹಿಂದೆ ನಿಧನರಾದ ನಂತರ ಆಕೆಯ ತಾಯಿ ಈಗ ತನ್ನ ಎರಡನೇ ಪತಿಯೊಂದಿಗೆ ನೆಲೆಸಿದ್ದಾರೆ. ಇಷ್ಟು ವರ್ಷ ನಾಪತ್ತೆಯಾಗಿದ್ದ ಪುತ್ರಿಯನ್ನು ಮೊದಲ ಬಾರಿ ನೋಡಿದಾಗ ಆ ತಾಯಿಯ ಕಣ್ಣುಗಳಲ್ಲಿ ನೀರು ತುಂಬಿತ್ತು" ಎಂದು ಪುರೋಹಿತ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News