×
Ad

ಅಕ್ರಮ ಹಣ, ಚಿನ್ನ ಪಾವತಿಸಿದ್ದನ್ನು ಸೂ ಕಿ ಒಪ್ಪಿಕೊಂಡಿದ್ದಾರೆ: ಮ್ಯಾನ್ಮಾರ್ ಸೇನೆ ಹೇಳಿಕೆ

Update: 2021-03-11 21:47 IST

ಯಾಂಗನ್ (ಮ್ಯಾನ್ಮಾರ್), ಮಾ. 11: ಅಧಿಕಾರದಲ್ಲಿರುವಾಗ ಅಕ್ರಮವಾಗಿ 6 ಲಕ್ಷ ಡಾಲರ್ ನಗದು ಮತ್ತು ಚಿನ್ನವನ್ನು ಅಕ್ರಮವಾಗಿ ಪಾವತಿಸಿರುವುದನ್ನು ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿ ಒಪ್ಪಿಕೊಂಡಿದ್ದಾರೆ ಎಂದು ದೇಶದ ಸೇನಾ ಸರಕಾರದ ವಕ್ತಾರರೊಬ್ಬರು ಹೇಳಿದ್ದಾರೆ.

ಈ ಮಾಹಿತಿಯ ಆಧಾರದಲ್ಲಿ ತನಿಕೆ ನಡೆಸಲಾಗಿದೆ ಹಾಗೂ ಈ ಸಂಬಂಧ ಹಲವಾರು ಮಂದಿಯನ್ನು ಪ್ರಶ್ನಿಸಲಾಗುತ್ತಿದೆ ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಝಾವ್ ಮಿನ್ ಟುನ್ ಹೇಳಿದರು.

ಅಧ್ಯಕ್ಷ ವಿನ್ ಮ್ಯಿಂಟ್ ಹಾಗೂ ಹಲವು ಸಚಿವರು ಕೂಡ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದ ಸೇನಾ ವಕ್ತಾರ, ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಸೇನೆಯ ದೂರಿನ ಬಗ್ಗೆ ಕ್ರಮ ತೆಗೆದುಕೊಳ್ಳದಂತೆ ಅಧ್ಯಕ್ಷರು ದೇಶದ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿದ್ದರು ಎಂದು ಆರೋಪಿಸಿದರು.

ಫೆಬ್ರವರಿ 1ರಂದು ಮ್ಯಾನ್ಮಾರ್ ಸೇನೆಯು ಕ್ಷಿಪ್ರಕ್ರಾಂತಿ ನಡೆಸಿ ದೇಶದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಅಂದಿನಿಂದ ಸೂ ಕಿ ಮತ್ತು ವಿನ್ ಮ್ಯಿಂಟ್ ಸೇರಿದಂತೆ ದೇಶದ ಹಿರಿಯ ನಾಗರಿಕ ನಾಯಕರನ್ನು ಜೈಲಿನಲ್ಲಿರಿಸಲಾಗಿದೆ.

ಮ್ಯಾನ್ಮಾರ್‌ನಲ್ಲಿ ಹಿಂಸೆ ಖಂಡಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ

ನ್ಯೂಯಾರ್ಕ್, ಮಾ. 11: ಮ್ಯಾನ್ಮಾರ್‌ನ ಸೇನಾಡಳಿತದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿರುವವರ ವಿರುದ್ಧ ಸೇನೆ ಹರಿಯಬಿಡುತ್ತಿರುವ ಹಿಂಸೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಖಂಡಿಸಿದೆ ಹಾಗೂ ಸಂಯಮವನ್ನು ಕಾಪಾಡಿಕೊಳ್ಳುವಂತೆ ಸೇನೆಗೆ ಕರೆ ನೀಡಿದೆ.

  ಆದರೆ, ದೇಶದ ಆಡಳಿತವನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಂಡಿರುವುದನ್ನು ‘ಸೇನಾ ಕ್ಷಿಪ್ರಕ್ರಾಂತಿ’ ಎಂಬುದಾಗಿ ಕರೆಯಲು, ಅದನ್ನು ಖಂಡಿಸಲು ಹಾಗೂ ಸೇನೆಯ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಬೆದರಿಸಲು ಅದು ನಿರಾಕರಿಸಿದೆ. ಈ ಕ್ರಮಗಳಿಗೆ ಚೀನಾ ಮತ್ತು ರಶ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಸೇನಾಧಿಕಾರಿಗಳ ಮಕ್ಕಳ ಮೇಲೆ ಅಮೆರಿಕ ದಿಗ್ಬಂಧನ

ಮ್ಯಾನ್ಮಾರ್‌ನಲ್ಲಿ ಸೇನಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಮನ ಕಾರ್ಯಾಚರಣೆ ನಡೆಸುತ್ತಿರುವ ಸೇನೆಯ ಮೇಲೆ ಒತ್ತಡ ಹೇರುವುದಕ್ಕಾಗಿ, ಸೇನಾ ನಾಯಕ ಮಿನ್ ಆಂಗ್ ಹಲಯಂಗ್‌ರ ಇಬ್ಬರು ಮಕ್ಕಳು ಮತ್ತು ಅವರು ನಿಯಂತ್ರಿಸುತ್ತಿರುವ ಆರು ಕಂಪೆನಿಗಳ ಮೇಲೆ ಅಮೆರಿಕ ಬುಧವಾರ ದಿಗ್ಬಂಧನ ವಿಧಿಸಿದೆ.

‘‘ಮ್ಯಾನ್ಮಾರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರ ಮೇಲೆ ಸೇನೆ ನಡೆಸುತ್ತಿರುವ ಅವ್ಯಾಹತ ಹಿಂಸಾಚಾರ ಅಸ್ವೀಕಾರಾರ್ಹ’’ ಎಂದು ವಿದೇಶಿ ಸೊತ್ತುಗಳ ನಿಯಂತ್ರಣ ಕಚೇರಿಯ ನಿರ್ದೇಶಕ ಆ್ಯಂಡ್ರೀ ಗ್ಯಾಕಿ ಹೇಳಿದ್ದಾರೆ.

ಪ್ರತಿಭಟನಕಾರರ ಮೇಲೆ ಗುಂಡು: 7 ಸಾವು

ಸೇನಾಡಳಿತ ವಿರೋಧಿ ಪ್ರತಿಭಟನಕಾರರ ಮೇಲೆ ಮ್ಯಾನ್ಮಾರ್‌ನ ಭದ್ರತಾ ಪಡೆಗಳು ಗುರುವಾರ ನಡೆಸಿದ ವಿವೇಚನಾರಹಿತ ಗೋಲಿಬಾರಿನಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ನಡುವೆ, ಮ್ಯಾನ್ಮಾರ್ ಸೇನೆಯು ಶಾಂತಿಯುತವಾಗಿ ಧರಣಿ ನಡೆಸುತ್ತಿರುವ ಜನರ ವಿರುದ್ಧ ಯುದ್ಧ ಭೂಮಿಯಲ್ಲಿ ಅನುಸರಿಸಲಾಗುವ ಯುದ್ಧತಂತ್ರಗಳನ್ನು ಬಳಸುತ್ತಿದೆ ಎಂದು ಮಾನವಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News