ಭಾರತ: 6 ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ಪತ್ತೆ

Update: 2021-03-12 17:14 GMT

 ಹೊಸದಿಲ್ಲಿ,ಮಾ.12: ಕಳೆದ ಆರು ದಿನಗಳಲ್ಲಿ ಭಾರತದಲ್ಲಿ ಒಟ್ಟು ಒಂದು ಲಕ್ಷಕ್ಕೂ ಅಧಿಕ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಶುಕ್ರವಾರ ಬೆಳಗ್ಗಿನ ತನಕ ಕಳೆದ 24 ತಾಸುಗಳಲ್ಲಿ 23,285 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು 78 ದಿನಗಳಲ್ಲೇ ಅತ್ಯಧಿಕ ಏರಿಕೆಯಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶಾದ್ಯಂತ ಈವರೆಗೆ ಕೋವಿಡ್-19 ಪ್ರಕರಣಗಳ ಸಂಖ್ಯೆ 1,13,08,446ಕ್ಕೆ ತಲುಪಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,58,306ಕ್ಕೆ ತಲುಪಿದೆ. ಕಳೆದ 24 ತಾಸುಗಳಲ್ಲಿ 117 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ದೇಶಾದ್ಯಂತ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 1,97,237ಕ್ಕೇರಿದ್ದು ಇದು ಒಟ್ಟು ಸೋಂಕಿನ ಪ್ರಕರಣಗಳ ಶೇ.1.74ರಷ್ಟಾಗಿದೆ ಇದೇ ವೇಳೆ ಚೇತರಿಕೆಯ ಪ್ರಮಾಣವು ಶೇ.96.86ಕ್ಕೆ ಕುಸಿದಿದೆ.

  ಡಿಸೆಂಬರ್‌ನಲ್ಲಿ ಪ್ರತಿ 24 ತಾಸುಗಳ ಅಂತರದಲ್ಲಿ ಸರಾಸರಿ 24,24,712 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಕಳೆದ ಆರು ದಿನಗಳಲ್ಲಿ ದೇಶದಲ್ಲಿ 1,16,758 ಪ್ರಕರಣಗಳು ದಾಖಲಾಗಿದ್ದವು.

 ಇದೇ ವೇಳೆ ಕೊರೋನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1,09,53,303ಕ್ಕೇರಿದ್ದರೆ, ಸಾವಿನ ಪ್ರಕರಣಗಳ ಪ್ರಮಾಣ ಶೇ.1.40 ಆಗಿದೆ ಎಂದು ಆರೋಗ್ಯ ಸಚಿವಾಲಯ ಅಂಕಿಅಂಶಗಳು ತಿಳಿಸಿವೆ.

 ಭಾರತದ ಕೋವಿಡ್-19 ಸಂಖ್ಯೆಯು 2020ರ ಆಗಸ್ಟ್ 7ರಂದು 20 ಲಕ್ಷ, ಆಗಸ್ಟ್ 23ರಂದು 30 ಲಕ್ಷ, ಸೆಪ್ಟೆಂಬರ್ 5ರಂದು 40 ಲಕ್ಷ ಹಾಗೂ ಸೆಪ್ಟೆಂಬರ್ 16ರಂದು 50 ಲಕ್ಷದ ಗಡಿಯನ್ನು ದಾಟಿತ್ತು. ಸೆಪ್ಟೆಂಬ 28ರಂದು 60 ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್ 90 ಲಕ್ಷ ಹಾಗೂ ಡಿಸೆಂಬರ್ 19ರಂದು ಒಂದು ಕೋಟಿಯ ಗಡಿಯನ್ನು ದಾಟಿತ್ತು.

ಮಹಾರಾಷ್ಟ್ರದಲ್ಲಿ 57, ಪಂಜಾಬ್ 18 ಹಾಗೂ ಕೇರಳದಿಂದ 13 ಸೇರಿದಂತೆ ಶುಕ್ರವಾರ ದೇಶಾದ್ಯಂತ 117 ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ.

ಈವರೆಗೆ ದೇಶಾದ್ಯಂತ 1,58,306 ಸಾವಿನ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಗರಿಷ್ಠ 52,667 ಸಾವಿನ ಪ್ರಕರಣಗಳು ವರದಿಯಾಗಿವೆ. ತಮಿಳುನಾಡು 12,535, ಕರ್ನಾಟಕ 12,381,ದಿಲ್ಲಿಯಲ್ಲಿ 10,934, ಪಶ್ಚಿಮಬಂಗಾಳ 10,286, ಉತ್ತರಪ್ರದೇಶ 8741 ಹಾಗೂ ಆಂಧ್ರಪ್ರದೇಶದಲ್ಲಿ 7,179 ಪ್ರಕರಣಗಳು ವರದಿಯಾಗಿವೆ.

ಕೋವಿಡ್-19ನಿಂದ ಮೃತಪಟ್ಟವರ ಪೈಕಿ ಶೇ.70ಕ್ಕೂ ಅಧಿಕ ಮಂದಿ ಇತರ ಅನಾರೋಗ್ಯಗಳಿಂದಲೂ ಬಳಲುತ್ತಿದ್ದರು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News