ಭಾರತದ ಸಾಧನೆ ಜಗತ್ತಿಗೇ ಬೆಳಕಾಗಿದೆ: ಪ್ರಧಾನಿ ಮೋದಿ
ಅಹ್ಮದಾಬಾದ್,ಮಾ.12: ಭಾರತದ 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಕೇಂದ್ರ ಸರಕಾರವು ಹಮ್ಮಿಕೊಂಡಿರುವ ‘ಆಝಾದಿ ಕಿ ಅಮೃತ ಮಹೋತ್ಸವಕ್ಕೆ ’ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನ ಮತ್ತು ಪ್ರಜಾತಾಂತ್ರಿಕ ಪರಂಪರೆಗಳ ಬಗ್ಗೆ ನಮಗೆ ಹೆಮ್ಮೆಯಿದೆ. ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಹಾಗೂ ಅದನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಮುಂದುವರಿದಿದ್ದೇವೆ. ಭಾರತದ ಸಾಧನೆಗಳು ಕೇವಲ ನಮಗಷ್ಟೇ ಅಲ್ಲ, ಇಡೀ ಜಗತ್ತಿಗೆ ಬೆಳಕನ್ನು ತೋರಿಸಿದೆ’’ ಎಂದು ಹೇಳಿದರು.
75ನೇ ಸ್ವಾತಂತ್ರೋತ್ಸವದ ಆಚರಣೆಗಳು 2023ರ ಆಗಸ್ಟ್ 15ರವರೆಗೂ ಮುಂದುವರಿಯಲಿದೆ ಎಂದು ಮೋದಿ ತಿಳಿಸಿದರು. ಈವರೆಗೆ ಬೆಳಕಿಗೆ ಬಾರದ ಸ್ವಾತಂತ್ರ ಹೋರಾಟಗಾರರ ಇತಿಹಾಸವನ್ನು ಕಾಪಾಡಲು ಕಳೆದ ಆರು ವರ್ಷಗಳಲ್ಲಿ ‘ಪ್ರಜ್ಞಾಪೂರ್ವಕವಾದ ಪ್ರಯತ್ನ’ಗಳನ್ನು ನಡೆಸಲಾಗಿದೆಯೆಂದು ಅವರು ಹೇಳಿದರು.
ಪ್ರಗತಿಯೆಡೆಗೆ ಜಗತ್ತಿನ ಪಯಣಕ್ಕೆ ಭಾರತದ ಆತ್ಮನಿರ್ಭರ ನಿಲುವು ಹೊಸ ವೇಗವನ್ನು ನೀಡಲಿದೆ ಎಂದವರು ಹೇಳಿದರು.
ಸ್ವಾತಂತ್ರ ಹೋರಾಟ,75ರ ಚಿಂತನೆಗಳು, 75ರ ಸಾಧನೆಗಳು, 75ರ ಕಾರ್ಯಗಳು ಹಾಗೂ 75ರ ನಿರ್ಧಾರಗಳು ಎಂಬ ಈ ನಾಲ್ಕು ಆಧಾರಸ್ತಂಭಗಳು, ದೇಶದ ಮುನ್ನಡೆಗೆ ಮಾರ್ಗದರ್ಶಿ ಶಕ್ತಿಯಾಗಲಿದೆ ಎಂದು ಪ್ರಧಾನಿ ತಿಳಿಸಿದರು.
ಸ್ವಾತಂತ್ರ ಹೋರಾಟಗಾರರ ಕೊಡುಗೆಗಳು ಹಾಗೂ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ವಿವಿಧ ಘಟನೆಗಳನ್ನು ದಾಖಲಿಸುವ ಕಾರ್ಯವನ್ನು ಕೇಂದ್ರ ಸರಕಾರ ನಡೆಸುತ್ತಿರುವುದಾಗಿ ಮೋದಿ ಹೇಳಿದರು. ‘‘ ದೇಶದ ಪ್ರತಿಯೊಂದು ರಾಜ್ಯ ಹಾಗೂ ಪ್ರಾಂತದಲ್ಲಿ ನಡೆದ ಭಾರತೀಯ ಸ್ವಾತಂತ್ರ ಚಳವಳಿಯ ಇತಿಹಾಸವನ್ನು ಸಂರಕ್ಷಿಸಲು ಕಳೆದ ಆರು ವರ್ಷಗಳಿಂದ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ನಡೆಯುತ್ತಿರುವುದಾಗಿ ಅವರು ಹೇಳಿದರು.
ಮಹಾತ್ಮಾಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹ ದಂಡಿಯಾತ್ರೆಯ ಸ್ಮರಣಾರ್ಥವಾಗಿ ಸಾಬರಮತಿ ಆಶ್ರಮದಿಂದ ಆಯೋಜಿಸಲಾದ ಪಾದಯಾತ್ರೆಗೆ ಪ್ರಧಾನಿಯವರು ಚಾಲನೆ ನೀಡಿದರು.
ಅಹ್ಮದಾಬಾದ್‌ನಲ್ಲಿರುವ ಸಾಬರಮತಿ ಆಶ್ರಮದಿಂದ ನವ್‌ಸಾರಿ ಜಿಲ್ಲೆಯ ದಂಡಿಗೆ ನಡೆಯುವ 386 ಕಿ.ಮೀ.ಗಳ ಪಾದಯಾತ್ರೆಯಲ್ಲಿ 81 ಮಂದಿ ಪಾಲ್ಗೊಳ್ಳಲಿದ್ದಾರೆ. 25 ದಿನಗಳ ಈ ಸುದೀರ್ಘ ಪಾದಯಾತ್ರೆಯು ಎಪ್ರಿಲ್ 5ರಂದು ಕೊನೆಗೊಳ್ಳಲಿದೆ.
ಬ್ರಿಟಿಶ್ ಆಡಳಿತವು ಉಪ್ಪಿಗೆ ತೆರಿಗೆ ವಿಧಿಸಿದ್ದರ ವಿರುದ್ಧ ಅಹಿಂಸಾತ್ಮಕ ಪ್ರತಿಭಟನೆಯಾಗಿ 1930ರ ಮಾರ್ಚ್ 12ರಂದು ಮಹಾತ್ಮಾಗಾಂಧೀಜಿಯವರ ನೇತೃತ್ವದಲ್ಲಿ 78 ಮಂದಿ ಸಾಬರಮತಿ ಆಶ್ರಮದಿಂದ ದಂಡಿಗೆ ಯಾತ್ರೆಯನ್ನು ಆರಂಭಿಸಿದ್ದರು.
ದಿಲ್ಲಿಯಿಂದ ಅಹ್ಮದಾಬಾದ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಮೋದಿಯವರು ನೇರವಾಗಿ ಸಾಬರಾಮತಿ ಆಶ್ರಮಕ್ಕೆ ಆಗಮಿಸಿದ ನರೇಂದ್ರ ಮೋದಿಯವರು ಮಹಾತ್ಮಾಗಾಂಧೀಜಿಯವರ ಸ್ಮಾರಕಕ್ಕೆ ಪುಷ್ಪಾಂಜಲಿ ಅರ್ಪಿಸಿದರು.
ಆಶ್ರಮದ ಸಂಕೀರ್ಣದಲ್ಲೇ ಇರುವ ಮಹಾತ್ಮಾಗಾಂಧೀಜಿಯವರು 1918ರಿಂದ 1930ರವರೆಗೆ ತಮ್ಮ ಪತ್ನಿ ಕಸ್ತೂರ್ಬಾ ಜೊತೆ ಉಳಿದುಕೊಂಡಿದ್ದ ಹೃದಯ ಕುಂಜಕ್ಕೂ ಪ್ರಧಾನಿ ಭೇಟಿ ನೀಡಿದರು. 75ನೇ ಸ್ವಾತಂತ್ರ ಮಹೋತ್ಸವವು ದೇಶದ ಸ್ವಾತಂತ್ರ ಹೋರಾಟಗಾರರು ಹಾಗೂ ಸ್ವಾತಂತ್ರ್ಯ ಚಳವಳಿಗೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ ಎಂದು ಮೋದಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆದರು.
"ಆಜಾದಿ ಕಾ ಅಮೃತ ಮಹೋತ್ಸವವು ನಮ್ಮ ಸ್ವಾತಂತ್ರ ಹೋರಾಟಗಾರರು ಹಾಗೂ ಸ್ವಾತಂತ್ರ ಚಳವಳಿಗೆ ನಮ್ಮ ಜನತೆ ಸಲ್ಲಿಸುವ ಶ್ರದ್ಧಾಂಜಲಿಯಾಗಿದೆ. ಈ ಸಂಭ್ರಮಾಚರಣೆಯಲ್ಲಿ ದೇಶವು ಸ್ವಾತಂತ್ರ ಚಳವಳಿಯ ಕೇವಲ ಪ್ರಮುಖ ಮೈಲುಗಲ್ಲುಗಳನ್ನು ಮಾತ್ರವಲ್ಲ, ಕೆಲವು ಮಹತ್ವದ ಸಂದರ್ಭಗಳನ್ನೂ ಸ್ಮರಿಸಿಕೊಳ್ಳಲಿದೆ ಹಾಗೂ ನಮ್ಮ ಭವಿಷ್ಯದ ಬೆಳವಣಿಗೆಗಾಗಿ ನೂತನ ಶಕ್ತಿಯನ್ನು ಪಡೆದುಕೊಳ್ಳಲಿದೆ. ಬಾಪೂ ಅವರ ಆಶೀರ್ವಾದದೊಂದಿಗೆ ಈ ಅಮೃತ ಮಹೋತ್ಸದ ಸಂದರ್ಭ ನಾವು ಭಾರತೀಯರು ನಮ್ಮ ಕರ್ತವ್ಯಗಳನ್ನು ಅನುಸರಿಸುತ್ತೇವೆ ಹಾಗೂ ಗುರಿಗಳನ್ನು ಸಾಧಿಸಲಿದ್ದೇವೆ ಎಂಬ ಆತ್ಮವಿಶ್ವಾಸವನ್ನು ನಾನು ಹೊಂದಿದ್ದೇನೆ."
-ಸಾಬರಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಮೋದಿ ಬರಹ