ಬಿಜೆಪಿಯ ಮಾಜಿ ಹಿರಿಯ ನಾಯಕ ಯಶ್ವಂತ್‌ ಸಿನ್ಹಾ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

Update: 2021-03-13 07:29 GMT
photo: ANI

ಕೊಲ್ಕತ್ತಾ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಮಾಜಿ ಹಿರಿಯ ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ವಾರಗಳ ಮುಂಚೆಯೇ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 83 ವರ್ಷದ ಯಶ್ವಂತ್‌ ಸಿನ್ಹಾ 2018 ರಲ್ಲಿ ಬಿಜೆಪಿ ಪಕ್ಷವನ್ನು ತೊರೆದಿದ್ದರು.

ಕೋಲ್ಕತ್ತಾದ ತೃಣಮೂಲ ಭವನದಲ್ಲಿ ಟಿಎಂಸಿ ಮುಖಂಡರಾದ ಡೆರೆಕ್ ಒ ಬ್ರಿಯಾನ್, ಸುದೀಪ್ ಬಂದೋಪಾಧ್ಯಾಯ ಮತ್ತು ಸುಬ್ರತಾ ಮುಖರ್ಜಿ ಅವರ ಸಮ್ಮುಖದಲ್ಲಿ ಮಧ್ಯಾಹ್ನ  ಸಿನ್ಹಾ ತಮ್ಮ ಹೊಸ ಪಕ್ಷಕ್ಕೆ ಸೇರಿದರು. ಈ ಬೆಳವಣಿಗೆಯ ಕುರಿತು ಮಾತನಾಡಿದ ಮುಖರ್ಜಿ, "ಯಶ್ವಂತ್ ಸಿನ್ಹಾ ನಮ್ಮೊಂದಿಗೆ ಸೇರ್ಪಡೆಗೊಂಡಿದ್ದಕ್ಕೆ ನಮಗೆ ಹೆಮ್ಮೆ ಇದೆ." ಎಂದು ಹೇಳಿಕೆ ನೀಡಿದ್ದಾರೆ.

"ದೇಶ ಇಂದು ಆತಂಕಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿಯು ಪ್ರಜಾಪ್ರಭುತ್ವದ ಸಂಸ್ಥೆಗಳ ಬಲದಲ್ಲಿದೆ. ನ್ಯಾಯಾಂಗ ಸೇರಿದಂತೆ ಈ ಎಲ್ಲಾ ಸಂಸ್ಥೆಗಳು ಈಗ ದುರ್ಬಲವಾಗಿವೆ" ಎಂದು ಯಶ್ವಂತ್‌ ಸಿನ್ಹಾ ಹೇಳಿಕೆ ನೀಡಿದ್ದಾರೆ.

ಯಶ್ವಂತ್ ಸಿನ್ಹಾ ಮೊದಲು ನವೆಂಬರ್ 1990 ರಲ್ಲಿ ಹಣಕಾಸು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು ಮತ್ತು ಜೂನ್ 1991 ರವರೆಗೆ ಪ್ರಧಾನ ಮಂತ್ರಿ ಚಂದ್ರಶೇಖರ್ ಸರಕಾರದಲ್ಲಿ ಸೇವೆ ಸಲ್ಲಿಸಿದರು. ಅವರ ಎರಡನೆಯ ಅಧಿಕಾರಾವಧಿ ಡಿಸೆಂಬರ್ 1998 ಮತ್ತು ಜುಲೈ 2002 ರ ನಡುವೆ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರ ಅಡಿಯಲ್ಲಿ ವಿಸ್ತರಿಸಿತು. ಅಲ್ಲಿಂದ ಮೇ 2004 ರವರೆಗೆ ಅವರು ಭಾರತದ ವಿದೇಶಾಂಗ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News