"ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ನಿಂದ ನಿಮಗೆ ಬೇಕಾದ ಮಾಹಿತಿಯನ್ನು ಮಾತ್ರ ಹೇಗೆ ಸಂಗ್ರಹಿಸುತ್ತೀರಿ?"

Update: 2021-03-13 07:54 GMT

ಹೊಸದಿಲ್ಲಿ: ವಕೀಲ ಮೆಹಮೂದ್ ಪ್ರಾಚಾ ಅವರ ಇತರ ಕಕ್ಷಿಗಾರರ ಮಾಹಿತಿ ಬಹಿರಂಗಗೊಳ್ಳದ ರೀತಿಯಲ್ಲಿ ಅವರ ಪೆನ್ ಡ್ರೈವ್‍ ಹಾಗೂ ಹಾರ್ಡ್‌ ಡಿಸ್ಕ್‌ ನಿಂದ ಅಗತ್ಯ ಡಾಟಾ ಹೊರತೆಗೆಯುವ ಪ್ರಕ್ರಿಯೆಯನ್ನು ಹೇಗೆ ಮಾಡುವಿರಿ ಎಂದು ದಿಲ್ಲಿಯ ನ್ಯಾಯಾಲಯ ಶುಕ್ರವಾರ ಪೊಲೀಸರನ್ನು ಕೇಳಿದೆ. ಈ ಕುರಿತಂತೆ ಮಾರ್ಚ್ 19ರೊಳಗಾಗಿ  ಪ್ರತಿಕ್ರಿಯೆ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ  ಪಟಿಯಾಲಾದ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮ ಸೂಚಿಸಿದ್ದಾರೆ.

ರಾಜಧಾನಿಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಆರೋಪಗಳನ್ನು ಎದುರಿಸುತ್ತಿರುವ  ಹಲವರ ವಕೀಲರಾಗಿರುವ ಪ್ರಾಚಾ ಅವರು ದಿಲ್ಲಿ ಪೊಲೀಸರು  ತಮ್ಮ ಕಚೇರಿಗೆ ದಾಳಿ ನಡೆಸಿದ ಸರ್ಚ್ ವಾರಂಟ್‍ಗಳನ್ನು  ಪ್ರಶ್ನಿಸಿ ಮಾರ್ಚ್ 10ರಂದು ನ್ಯಾಯಾಲಯದ ಕದ ತಟ್ಟಿದ್ದರು. ಮಾರ್ಚ್ 12ರ ತನಕ ಸರ್ಚ್ ವಾರಂಟ್‍ಗಳಿಗೆ ಕೋರ್ಟ್ ತಡೆಯಾಜ್ಞೆ ವಿಧಿಸಿದೆ. ಡಿಸೆಂಬರ್ ತಿಂಗಳಲ್ಲೂ ಪೊಲೀಸರು ಪ್ರಾಚಾ ಅವರ ಕಚೇರಿಯಲ್ಲಿ ಶೋಧಿಸಿದ್ದರು.

ಶುಕ್ರವಾರದ ವಿಚಾರಣೆ ವೇಳೆ ನ್ಯಾಯಾಲಯವು ಪ್ರಾಚಾ ಅವರ ಕಕ್ಷಿಗಾರರ ಕುರಿತ ಮಾಹಿತಿಯ ಗೌಪ್ಯತೆಯನ್ನು ರಕ್ಷಿಸುವ ಅನಿವಾರ್ಯತೆ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 126 ಅನ್ವಯ ಅನಿವಾರ್ಯವಾಗಿದೆ ಎಂದು  ಹೇಳಿದೆಯಲ್ಲದೆ ಪ್ರಾಚಾ ಅವರು  ಪೊಲೀಸರು ತಮ್ಮ ಸರ್ಚ್ ವಾರಂಟ್‍ನಲ್ಲಿ ಉಲ್ಲೇಖಿಸಿರುವಂತೆ ಅಗತ್ಯ ಮಾಹಿತಿ ನೀಡಲು ಒಪ್ಪಿರುವುದನ್ನೂ ಪರಿಗಣನೆಗೆ ತೆಗೆದುಕೊಂಡಿದೆ.

ತಮ್ಮ ಕಂಪ್ಯೂಟರ್‍ಗಳ ಹಾರ್ಡ್ ಡಿಸ್ಕ್ ಗಳನ್ನು ಕೊಂಡೊಯ್ಯುವ ಪೊಲೀಸರ ನಿರ್ಧಾರ ಅಕ್ರಮ ಹಾಗೂ ಅಸಮರ್ಥನೀಯ ಎಂದು ಪ್ರಾಚಾ ತಮ್ಮ ಅಪೀಲಿನಲ್ಲಿ ಹೇಳಿದ್ದು ಪೊಲೀಸರು ಕೇಳಿದ ಮಾಹಿತಿ ಈಗಾಗಲೇ ಅವರಿಗೆ ಹಿಂದಿನ (ಡಿಸೆಂಬರ್) ಕ್ರಮದ ವೇಳೆ ದೊರಕಿದೆ" ಎಂದು ಹೇಳಿದ್ದಾರೆ. ತಮ್ಮ ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ನಿಂದ ಅಗತ್ಯ ಮಾಹಿತಿಯನ್ನು ಮಾತ್ರ ಮ್ಯಾಜಸ್ಟ್ರೇಟ್ ಸಮ್ಮುಖ ಪಡೆಯಬೇಕು. ಇಡೀ ಹಾರ್ಡ್ ಡಿಸ್ಕ್ ನಲ್ಲಿನ ಮಾಹಿತಿ  ಪಡೆಯುವುದಕ್ಕೆ ತಮ್ಮ ವಿರೋಧವಿದೆ ಎಂದು ಅವರು ಹೇಳಿದ್ದಾರಲ್ಲದೆ, "ಪೊಲೀಸರಿಗೆ ನನ್ನ ಕಕ್ಷಿಗಾರರನ್ನು ಟಾರ್ಗೆಟ್ ಮಾಡುವುದು ಬೇಕಿದೆ ಹಾಗೂ ಅವರು ತಮ್ಮ ರಾಜಕೀಯ ಮಾಲಕರ ಆಜ್ಞೆಯಂತೆ ನಡೆಯುತ್ತಿದ್ದಾರೆ" ಎಂದು  ತಮ್ಮ ವಾದ ಮಂಡನೆ ವೇಳೆ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News