×
Ad

ದೇವಸ್ಥಾನದ ನೀರು ಕುಡಿದ ಮುಸ್ಲಿಂ ಬಾಲಕನನ್ನು ಥಳಿಸಿದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು

Update: 2021-03-13 14:46 IST

ಗಾಝಿಯಾಬಾದ್: ದೇವಸ್ಥಾನದೊಳಗೆ ನೀರು ಕುಡಿದ ಮುಸ್ಲಿಂ ಬಾಲಕನಿಗೆ ವ್ಯಕ್ತಿಯೊಬ್ಬ ನಿರ್ದಯವಾಗಿ ಥಳಿಸುತ್ತಿರುವ ವೀಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿ ಶೃಂಗಿ ನಂದನ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ.

ವೀಡಿಯೋದಲ್ಲಿ ಆರೋಪಿ ಮೊದಲು ಆ ಮುಸ್ಲಿಂ ಬಾಲಕನನ್ನು ಆಲಂಗಿಸಿ ನಂತರ ಆತನಿಗೆ ಮನಬಂದಂತೆ ಥಳಿಸಿದ್ದಾನೆ. "ನಿನ್ನ ಹೆಸರೇನು?" ಎಂದು ಮೊದಲು ಆ ಬಾಲಕನಲ್ಲಿ ಕೇಳಿದ ಆರೋಪಿ ಆತ  ತಾನು ಆಸಿಪ್, ಹಬೀಬ್ ಎಂಬಾತನ ಪುತ್ರ ಎಂದು ಹೇಳುತ್ತಲೇ ಆತನಿಗೆ ಥಳಿಸಲು ಆರಂಭಿಸಿದ್ದ ಹಾಗೂ  ನಿಂದಿಸಿದ್ದ ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಖಂಡಿಸಿರುವ ಸಾಮಾಜಿಕ ಜಾಲತಾಣಿಗರು ಆರೋಪಿ ತನ್ನ ಅಮಾನವೀಯ ಕೃತ್ಯದಿಂದ ಹಿಂದು ಧರ್ಮಕ್ಕೆ ಅಗೌರವ ತೋರಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು  ವಿಶೇಷ ತಂಡ ರಚಿಸಿ ಆತನನ್ನು ಬಂಧಿಸಿದ್ದು ಆತ ಬಿಹಾರದ ಭಗಲ್ಪುರ್ ನಿವಾಸಿ ಎಂದು ತಿಳಿದು ಬಂದಿದೆ.

‌ಈ ಕುರಿತಾದಂತೆ ಟ್ವೀಟ್‌ ಮಾಡಿರುವ ರಿಫಾತ್ ಜಾವೇದ್, “ಮಗುವಿನ ಮೇಲೆ ನಿರ್ದಯವಾಗಿ ಹಲ್ಲೆ ಮಾಡಲು ನೀವು ಯಾವ ರೀತಿಯ ಅನಾರೋಗ್ಯ ಪೀಡಿತ ವ್ಯಕ್ತಿಯಾಗಿರಬೇಕು? ದೇವಾಲಯದಲ್ಲಿ ನೀರು ಕುಡಿಯಲು ಹೋದದ್ದು ಅವನ ತಪ್ಪೇ?. ಈ ರೋಗ್ರಗ್ರಸ್ಥ ಮನಸ್ಥಿತಿಯ ವ್ಯಕ್ತಿಯನ್ನು ಗಾಝಿಯಾಬಾದ್‌ ಪೊಲೀಸರು ಬಂಧಿಸುತ್ತಾರೆಂದು ಭಾವಿಸುತ್ತೇನೆ. ಆತ ಸಮಾಜಕ್ಕೆ ಅಪಾಯ” ಎಂದು ಹೇಳಿದ್ದರು. 

ಈ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಗಾಝಿಯಾಬಾದ್‌ ಪೊಲೀಸ್‌, "ಈ ವೀಡಿಯೋ ನಮ್ಮ ಗಮನಕ್ಕೆ ಬಂದಿದ್ದು, ನಾವು ವಿಶೇಷ ತಂಡವೊಂದನ್ನು ರಚಿಸಿದ್ದೇವೆ" ಎಂದು ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News