ನಂದಿಗ್ರಾಮದಲ್ಲಿ ಮಹಾಪಂಚಾಯತ್: ರಾಕೇಶ್ ಟಿಕಾಯತ್ ಘೋಷಣೆ

Update: 2021-03-13 14:40 GMT

ಕೋಲ್ಕತಾ: ಪಶ್ಚಿಮಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರಕ್ಕೆ ತಾನು ಭೇಟಿ ನೀಡಲಿದ್ದು, ಅಲ್ಲಿ ಮಹಾ ಪಂಚಾಯತ್ (ಸಾರ್ವಜನಿಕ ಸಭೆ) ನಡೆಸಲಾಗುವುದು ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ.

ಟಿಕಾಯತ್ ಅವರು ದಿಲ್ಲಿ-ಉತ್ತರಪ್ರದೇಶ ಗಡಿಭಾಗದಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ನೇತೃತ್ವವಹಿಸಿದ್ದಾರೆ. ಇಂದು ಕೋಲ್ಕತಾಕ್ಕೆ ಭೇಟಿ ನೀಡಿದ ಟಿಕಾಯತ್ ಅವರನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಡೋಲಾ ಸೇನ್ ಸ್ವಾಗತಿಸಿದರು.

ನಂದಿಗ್ರಾಮದಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುತ್ತಿರುವ ಕಾರಣ ಈ ಕ್ಷೇತ್ರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮಮತಾ ಅವರು ತನ್ನ ಮಾಜಿ ಬಲಗೈ ಬಂಟ, ಈಗ ಬಿಜೆಪಿಗೆ ಪಕ್ಷಾಂತರವಾಗಿರುವ ಸುವೇಂದು ಅಧಿಕಾರಿಯವರನ್ನು ನಂದಿಗ್ರಾಮದಲ್ಲಿ ಎದುರಿಸಲಿದ್ದು, ಈ ಕ್ಷೇತ್ರ ಭಾರೀ ಜಿದ್ದಾಜಿದ್ದಿನಿಂದ ಕೂಡಿದೆ.

ಮಮತಾ ಇತ್ತೀಚೆಗೆ ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿ ಪ್ರಚಾರದಲ್ಲಿ ತೊಡಗಿದ್ದಾಗ ಗುಂಪೊಂದು ಅವರನ್ನು ತಳ್ಳಿದ ಕಾರಣ ಅವರಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿದ್ದರು. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು,, ವೀಲ್ ಚೇರ್ ನಲ್ಲೆ ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News