×
Ad

ಹತ್ರಸ್ ಅತ್ಯಾಚಾರ ಪ್ರಕರಣದ ಕುರಿತು ಪ್ರತಿಭಟನೆ ನಡೆಸಿದ್ದ 10 ಹೋರಾಟಗಾರ್ತಿಯರಿಗೆ ಉತ್ತರಪ್ರದೇಶ ಪೊಲೀಸರಿಂದ ಸಮನ್ಸ್

Update: 2021-03-13 17:31 IST
photo: twitter

ಲಕ್ನೋ: ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆದ ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ 10 ಮಹಿಳಾ ಹೋರಾಟಗಾರ್ತಿಯರಿಗೆ ಕಳೆದೊಂದು ತಿಂಗಳ ಅವಧಿಯಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ ಎಂದು thewire.com ವರದಿ ಮಾಡಿದೆ.

ನೋಟಿಸ್ ಪಡೆದ ಹೋರಾಟಗಾರ್ತಿಯರಲ್ಲಿ ಉಝ್ಮಾ ಪರ್ವೀನ್, ಸುಮಯ್ಯ ರಾಣಾ, ಮಧು ಗರ್ಗ್ ಹಾಗೂ ಮೀನಾ ಸಿಂಗ್ ಸೇರಿದ್ದಾರೆ. ಇವರು 2019ರಲ್ಲಿ ಲಕ್ನೋದಲ್ಲಿ ನಡೆದ ಸಿಎಎ ವಿರೋಧಿ ಹೋರಾಟದಲ್ಲೂ ಸಕ್ರಿಯರಾಗಿದ್ದವರಾಗಿದ್ದಾರೆ ಎನ್ನಲಾಗಿದೆ.

ಈ ಹತ್ತು ಮಂದಿಗೂ  ನೀಡಲಾದ ನೋಟಿಸ್ ನಗರದ ಗೋಮತಿ ನಗರದ 1090 ಕ್ರಾಸಿಂಗ್‍ನಲ್ಲಿ ಅಕ್ಟೋಬರ್ 8, 2020ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ. ಸುಮಾರು ಐದು ತಿಂಗಳ ನಂತರ ಈ ನೋಟಿಸ್ ಜಾರಿಯಾಗಿದ್ದು ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ.

ತಮಗೆ ಬಂದಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಪರ್ವೀನ್, ತಮ್ಮ ವಿರುದ್ಧ ಸೆಕ್ಷನ್ 188, 145, 353 ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ."ವಾಸ್ತವವಾಗಿ ಪ್ರತಿಭಟನೆಯ ದಿನ ಲಕ್ನೋ ಪೊಲೀಸರು ನನ್ನನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದರಲ್ಲದೆ ಆರು ಗಂಟೆಗಳ ಕಾಲ ವಶಪಡಿಸಿಕೊಂಡಿದ್ದರು, ನನ್ನನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿದೆ" ಎಂದು ಸಿಎಎ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿರುವ ಅವರು ಹೇಳಿದ್ದಾರೆ.

ಹಿರಿಯ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ ಅಸೋಸಿಯೇಶನ್‍ನ ಹಿರಿಯ ಸದಸ್ಯೆ ಮಧು ಗರ್ಗ್ ಅವರಿಗೂ ನೋಟಿಸ್ ಜಾರಿಯಾಗಿದ್ದು ತಮ್ಮ ಮನೆಗೆ  ಇನ್‍ಸ್ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿ ಬಂದು ತಮ್ಮನ್ನು 30 ನಿಮಿಷ ಕಾಲ ವಿಚಾರಣೆ ನಡೆಸಿದ್ದಾರೆ ಎಂದರು. ಇವರು ಕೂಡ ಸಿಎಎ ವಿರುದ್ಧದ ಹೋರಾಟದಲ್ಲಿ  ಕೂಡ ಭಾಗಿಯಾಗಿದ್ದು ಬಿಜೆಪಿಯ ಕಟು ಟೀಕಾಕಾರರಾಗಿದ್ದಾರೆ.

ಆಲ್ ಇಂಡಿಯಾ ಪ್ರೊಗ್ರೆಸ್ಸಿವ್ ವಿಮೆನ್ ಅಸೋಸಿಯೇಶನ್‍ನ ಮೀನಾ ಸಿಂಗ್ ಅವರಿಗೂ ಠಾಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದರೂ ನೋಟಿಸ್‍ನ ಪ್ರತಿ ದೊರೆಯುವ ತನಕ ಠಾಣೆಗೆ ತೆರಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ಅವರ ಪುತ್ರಿಯರಾದ ಸುಮಯ್ಯ ರಾಣಾ ಹಾಗೂ ಫೌಝಿಯಾ ವಿರುದ್ಧವೂ ಎಫ್‍ಐಆರ್ ದಾಖಲಾಗಿದೆ.

ಸುಮಯ್ಯಾ ಅವರು ಡಿಸೆಂಬರ್ 29,2020ರಂದು ಸಮಾಜವಾದಿ ಪಕ್ಷ ಸೇರುವ ಕೆಲವೇ ದಿನಗಳಿಗೆ ಮುಂಚೆ ಅವರ ವಿರುದ್ಧ  ಪ್ರಕರಣ ದಾಖಲಾಗಿತ್ತು. ತಾವು ಬಾಂಡ್‍ಗೆ ಸಹಿ ಹಾಕಲು ಕೈಸರ್‍ಬಾಗ್ ಕೋತ್ವಾಲಿಯಲ್ಲಿರುವ ಎಸಿ ಕಚೇರಿಗೆ ಹೋಗಿದ್ದಾಗಿ ಹೇಳಿದ ಅವರು "ಸರಕಾರದ ತಾರತಮ್ಯಕಾರಿ ನೀತಿಗಳ ವಿರುದ್ಧ ಸುಮ್ಮನಿರುವುದಿಲ್ಲ" ಎಂದು ಸ್ಪಷ್ಟಪಡಿಸುತ್ತಾರೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರೆಯೂ ಆಗಿರುವ ರಾಣಾ,  ಘಂಟಾ ಘರ್‍ನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲೂ ಕಾಣಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ 30ರಿಂದ 35 ಮಹಿಳೆಯರು ʼಸರಕಾರದ ವಿರುದ್ಧ ಮೆರವಣಿಗೆʼ ನಡೆಸಿದ್ದರಲ್ಲದೆ ಕೋವಿಡ್ ಹಿನ್ನೆಲೆಯಲ್ಲಿ ಹೇರಲಾಗಿದ್ದ ಸೆಕ್ಷನ್ 144 ಉಲ್ಲಂಘಿಸಿದ್ದರು ಮತ್ತು ಮಾಸ್ಕ್ ಕೂಡ ಧರಿಸಿರಲಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಎಲ್ಲಾ ಹತ್ತು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 188, 145 ಹಾಗೂ 353 ಹೊರತಾಗಿ  ಸಾಂಕ್ರಾಮಿಕ ರೋಗಗಳ ಕಾಯಿದೆ 1897,  ವಿಪತ್ತು ನಿರ್ವಹಣಾ ಕಾಯಿದೆ 2005 ಇದರ ಸೆಕ್ಷನ್ 56 ಅನ್ವಯವೂ  ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News