×
Ad

"ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ": ಸಾಹಿತ್ಯ ಅಕಾಡಮಿ ಪ್ರಶಸ್ತಿ ತಿರಸ್ಕರಿಸಿದ ನಂದಾ ಖಾರೆ

Update: 2021-03-13 18:52 IST
PHOTO: wikimedia commons

ಮುಂಬೈ: "ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರದಿದ್ದರೂ ಈಗಾಗಲೇ ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ" ಎಂದ ಖ್ಯಾತ ಮರಾಠಿ ಲೇಖಕ ನಂದಾ ಖಾರೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. 2014ರಲ್ಲಿ ಪ್ರಕಟವಾಗಿದ್ದ ಅವರ ʼಉದ್ಯಾʼ ಕಾದಂಬರಿಯನ್ನು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಜ್ಞಾನಪೀಠ ಪ್ರಶಸ್ತಿಯ ಬಳಿಕ ಅತ್ಯಧಿಕ ಮೌಲ್ಯವುಳ್ಳ ಪ್ರಶಸ್ತಿಯನ್ನು ತಿರಸ್ಕರಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಖಾರೆ, " ನನಗೇನು ಬೇಕಿತ್ತೋ ಅದು ಸಿಕ್ಕಿದೆ. ನಾನು ಜನರ ಪ್ರೀತಿ, ಗೌರವವನ್ನು ಸ್ವೀಕರಿಸಿದ್ದೇನೆ. ನನಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ಅಗತ್ಯವಿಲ್ಲ. ಕಳೆದ ನಾಲ್ಕು ವರ್ಷಗಳಿಂದ ನಾನು ಪ್ರಶಸ್ತಿ ಪಡೆಯುವುದನ್ನು ನಿಲ್ಲಿಸಿದ್ದೇನೆ ” ಎಂದು ಅವರು ಹೇಳಿಕೆ ನೀಡಿದ್ದಾರೆ.

"ಕಳೆದ ಕೆಲವು ವರ್ಷಗಳಲ್ಲಿ ನಾವು ಹೆಚ್ಚು ಅನಾಗರಿಕರಾಗಿದ್ದೇವೆ. ಮೊದಲು ಅದು ಹಾಗೇನೂ ಇರಲಿಲ್ಲ. ಅಭಿಪ್ರಾಯಗಳಲ್ಲಿ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಜನರು ಪರಸ್ಪರ ಗೌರವ ಹೊಂದಿದ್ದರು. ಈಗ ಪದಗಳೆಲ್ಲಾ ಒಂದೇ ಆದರೂ ಸಂವಿಧಾನದ ಆತ್ಮವನ್ನೇ ಬದಲಾಯಿಸಲಾಗಿದೆ. ನಾನು ತುರ್ತು ಪರಿಸ್ಥಿತಿಯ ದಿನಗಳನ್ನು ನೋಡಿದ್ದೇನೆ. ಆದರೆ ಈ ಅಘೋಷಿತ ತುರ್ತು ಪರಿಸ್ಥಿತಿ ಹೆಚ್ಚು ಅಪಾಯಕಾರಿಯಾಗಿದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

ಪ್ರಶಸ್ತಿ ನಿರಾಕರಿಸಿದ ನಂತರ, ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ ಮೂವರು ತಜ್ಞರಲ್ಲಿ ಒಬ್ಬರಾದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನ್‌ ಮಾಜಿ ಅಧ್ಯಕ್ಷ ವಸಂತ್ ಅಬಾಜಿ ದಹಕೆ, ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ಅವರು ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆಂದು ನಮ್ಮಲ್ಲಿ ಯಾರಿಗೂ ತಿಳಿದಿರಲಿಲ್ಲ. ಆದ್ದರಿಂದ, ನಾವು ಅವರನ್ನು ಆಯ್ಕೆ ಮಾಡಿದ್ದೇವೆ. ಸಾಹಿತ್ಯ ಅಕಾಡೆಮಿ ಆಯ್ಕೆ ಮಾಡುವ ಮೊದಲು ಬರಹಗಾರರ ಒಪ್ಪಿಗೆ ಪಡೆಯುವುದಿಲ್ಲ.” ಎಂದು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News