ಬಿಜೆಪಿ ವಿರುದ್ದ ಮತ ಹಾಕಿ: ಪ. ಬಂಗಾಳ ಕಿಸಾನ್ ಮಹಾಪಂಚಾಯತ್ ನಲ್ಲಿ ಟಿಕಾಯತ್ ಕರೆ

Update: 2021-03-13 14:26 GMT

ಕೋಲ್ಕತಾ: ಬಿಜೆಪಿಗೆ ಮತ ಹಾಕಲೇ ಬೇಡಿ ಎಂದು ಪಶ್ಚಿಮಬಂಗಾಳದ ರಾಜಧಾನಿಯಲ್ಲಿ ಶನಿವಾರ ನಡೆದ ‘ಕಿಸಾನ್ ಮಹಾಪಂಚಾಯತ್’ನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಮುಂಬರುವ ಪಶ್ಚಿಮಬಂಗಾಳದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ. ಬಿಜೆಪಿಯನ್ನು ಸೋಲಿಸಬಲ್ಲ ಅಭ್ಯರ್ಥಿಗೆ ಮತ ಹಾಕಿ. ಹೀಗೆ ಮಾಡಿದರೆ ಕೇಂದ್ರ ಸರಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕಾದ ಒತ್ತಡಕ್ಕೆ ಸಿಲುಕುತ್ತದೆ ಎಂದ ಟಿಕಾಯತ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಲಿಗೆ ಗಾಯವಾಗಲು ಬಿಜೆಪಿಯೇ ಕಾರಣ ಎಂದು ದೂರಿದರು.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ಹಾಗೂ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರಾದ ಯಧುವೀರ್ ಸಿಂಗ್ ಸಹಿತ ಹಲವು ನಾಯಕರು ಶನಿವಾರ ಕೋಲ್ಕತಾದಲ್ಲಿ ನಡೆದಿದ್ದ ‘ಕಿಸಾನ್ ಮಹಾಪಂಚಾಯತ್’ನಲ್ಲಿ ಪಾಲ್ಗೊಂಡಿದ್ದರು. ರೈತ ನಾಯಕರು ರವಿವಾರದಂದು ಸಿಂಗ್ರೂರ್ ಹಾಗೂ ಅಸನೋಲ್ ನಲ್ಲಿಯೂ ಇದೇ ರೀತಿಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆ ಇದೆ.

ಬಿಜೆಪಿ ವಿರುದ್ದ ಪ್ರಚಾರ ನಡೆಸಲು 40ಕ್ಕೂ ಅಧಿಕ ರೈತ ಸಂಘಟನೆಗಳನ್ನು ಒಳಗೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಸಾರ್ವಜನಿಕ ಸಭೆಗಳನ್ನು  ನಡೆಸುವ ಯೋಜನೆ ಹಾಕಿಕೊಂಡಿದೆ.

ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕೂಡ ರೈತ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ನಂದಿಗ್ರಾಮ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡರೆ ನಿಮ್ಮ ಭೂಮಿಯನ್ನು ವಿಭಜಿಸುತ್ತದೆ ಎಂದು ಅವರು ಎಚ್ಚರಿಸಿದರು.

ನಂದಿಗ್ರಾಮದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯ ಹೆಸರನ್ನು ಎತ್ತದೆ ಮಾತನಾಡಿದ ಟಿಕಾಯತ್, ರಾಜಕೀಯ ನಾಯಕರು ಚನಾವಣೆಗಿಂತ ಮೊದಲು ಪಕ್ಷಾಂತರವಾಗುವುದನ್ನುಟೀಕಿಸಿದರು.

ನಾವು ನಂದಿಗ್ರಾಮಕ್ಕೆ ತೆರಳಿ ಸರಕಾರವು ತಮ್ಮ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಕೊಟ್ಟು ಖರೀದಿಸುತ್ತಿಲ್ಲ ಎಂದು ಜನರಿಗೆ ತಿಳಿಸುತ್ತೇವೆ. ಇಡೀ ದೇಶವನ್ನು ಲೂಟಿ ಮಾಡುತ್ತಿರುವ ಬಿಜೆಪಿಗೆ ಮತ ಹಾಕಬೇಡಿ ಎಂದು ನಾವು ಮನವಿ ಮಾಡುತ್ತೇವೆ ಎಂದು ಟಿಕಾಯತ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News