ಗುಜರಾತ್: ಸುಳ್ಳು ಕೋವಿಡ್-19 ನೆಗೆಟಿವ್ ವರದಿಗಳನ್ನು ಮಾರುತ್ತಿದ್ದ ವ್ಯಕ್ತಿಯ ಸೆರೆ

Update: 2021-03-13 15:12 GMT

ರಾಜಕೋಟ,ಮಾ.13: ಜನರಿಗೆ ಸುಳ್ಳು ಕೋವಿಡ್-19 ವರದಿಗಳನ್ನು ಮಾರಾಟ ಮಾಡುತ್ತಿದ್ದ ಲ್ಯಾಬೊರೇಟರಿ ಏಜೆಂಟ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪರಾಗ್ ಜೋಶಿ 1,500 ರೂ.ಗಳನ್ನು ಪಡೆದುಕೊಂಡು ಅಗತ್ಯವುಳ್ಳವರಿಗೆ ಕೋವಿಡ್-19 ನೆಗೆಟಿವ್ ವರದಿಗಳನ್ನು ಒದಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

 ಉಪ ವೈದ್ಯಾಧಿಕಾರಿ ಡಾ.ಪರಾಗ್ ಚುನರಾ ಸಲ್ಲಿಸಿರುವ ದೂರಿನ ಮೇರೆಗೆ ಜೋಶಿ ಮತ್ತು ಇನ್ನೋರ್ವ ಅಪರಿಚಿತ ಆರೋಪಿಯ ವಿರುದ್ಧ ಐಪಿಸಿ,ವಿಪತ್ತು ನಿರ್ವಹಣೆ ಕಾಯ್ದೆ ಮತ್ತು ಗುಜರಾತ್ ವೈದ್ಯರ ಕಾಯ್ದೆಯ ವಿವಿಧ ಕಲಮ್‌ಗಳಡಿ ಗಾಂಧಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೋಶಿ ಪ್ರಯೋಗಾಲಯಗಳಿಗಾಗಿ ಸ್ಯಾಂಪಲ್‌ಗಳನ್ನು ಸಂಗ್ರಹಿಸುವ ಕೇಂದ್ರವೊಂದನ್ನು ತನ್ನ ಮನೆಯಿಂದಲೇ ನಡೆಸುತ್ತಿದ್ದ ಮತ್ತು ಅಗತ್ಯವುಳ್ಳವರ ಗಂಟಲುದ್ರವ ಸ್ಯಾಂಪಲ್‌ಗಳನ್ನು ಸಂಗ್ರಹಿಸದೆ ಅವರಿಗೆ ಕೋವಿಡ್-19 ನೆಗೆಟಿವ್ ವರದಿಗಳನ್ನು ಒದಗಿಸುತ್ತಿದ್ದ. ವರದಿ ಯಾರ ಹೆಸರಿಗೆ ಬೇಕಿದೆಯೋ ಅವರ ದಾಖಲೆಗಳೊಂದಿಗೆ ಬೇರೆ ವ್ಯಕ್ತಿಯ ಸ್ಯಾಂಪಲ್‌ಗಳನ್ನು ಆತ ಪ್ರಯೋಗಾಲಯಗಳಿಗೆ ಸಲ್ಲಿಸುತ್ತಿದ್ದ ಮತ್ತು ಪ್ರಯೋಗಾಲಯವು ತಾನು ಯಾರ ಹೆಸರಿನಲ್ಲಿಯ ದಾಖಲೆಗಳನ್ನು ಸ್ವೀಕರಿಸಿದ್ದೆನೋ ಆ ವ್ಯಕ್ತಿಯ ಹೆಸರಿಗೆ ಕೋವಿಡ್-19 ನೆಗೆಟಿವ್ ವರದಿಯನ್ನು ನೀಡುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಆರೋಪಿಯು ಸ್ಯಾಂಪಲ್ ಸಂಗ್ರಹ ಕೇಂದ್ರಕ್ಕೆ ಅಗತ್ಯ ಅನುಮತಿಯನ್ನೂ ಪಡೆದಿರಲಿಲ್ಲ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News