2022ರ ವೇಳೆಗೆ 15 ವರ್ಷಗಳಷ್ಟು ಹಳೆಯ ಸರಕಾರಿ ವಾಹನಗಳ ನೋಂದಣಿ ನವೀಕರಣ ಇಲ್ಲ:ಕೇಂದ್ರ
ಹೊಸದಿಲ್ಲಿ,ಮಾ.13: 2022,ಎ.1ಕ್ಕೆ 15 ವರ್ಷಗಳಷ್ಟು ಹಳೆಯದಾಗುವ ಸರಕಾರಿ ವಾಹನಗಳ ನೋಂದಣಿಯನ್ನು ನವೀಕರಣ ಮಾಡಲಾಗುವುದಿಲ್ಲ ಎಂಬ ಕರಡು ಅಧಿಸೂಚನೆಯನ್ನು ಶುಕ್ರವಾರ ರಾತ್ರಿ ಹೊರಡಿಸುವ ಮೂಲಕ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಕೇಂದ್ರದ ಮಹತ್ವಾಕಾಂಕ್ಷೆಯ ಸ್ವಯಂಪ್ರೇರಿತ ವಾಹನ ಗುಜರಿ ನೀತಿಯ ಅನುಷ್ಠಾನಕ್ಕೆ ಮಾರ್ಗವನ್ನು ಸುಗಮಗೊಳಿಸಿದೆ.
ಈ ಅಧಿಸೂಚನೆಯು ಕೇಂದ್ರ,ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಾರ್ವಜನಿಕ ಕ್ಷೇತ್ರದ ಉದ್ಯಮಗಳು, ಮುನ್ಸಿಪಲ್ ಸಂಸ್ಥೆಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಒಡೆತನದ ಎಲ್ಲ ವಾಹನಗಳಿಗೆ ಅನ್ವಯಿಸುತ್ತದೆ.
ಕರಡು ಅಧಿಸೂಚನೆಯನ್ನು 30 ದಿನಗಳ ಅವಧಿಗೆ ಸಾರ್ವಜನಿಕ ಅವಗಾಹನೆಗೆ ಒದಗಿಸಲಾಗಿದ್ದು,ಸಾರ್ವಜನಿಕರಿಂದ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಅಂತಿಮ ಅಧಿಸೂಚನೆಯನ್ನು 30 ದಿನಗಳ ಬಳಿಕ ಹೊರಡಿಸಲಾಗುವುದು.
ಇದರೊಂದಿಗೆ ಸರಕಾರಿ ವಾಹನಗಳು 15 ವರ್ಷಗಳ ಆಯುಷ್ಯದ ಬಳಿಕ ಗುಜರಿಗೆ ಸೇರಲಿರುವ ವಾಹನಗಳ ಮೊದಲ ವರ್ಗದಲ್ಲಿ ಸೇರ್ಪಡೆಗೊಂಡಿವೆ.
ಸರಕಾರದ ನೂತನ ನೀತಿಯಡಿ ಸರಕಾರಿ ಮತ್ತು ವಾಣಿಜ್ಯ ವಾಹನಗಳ ಜೀವಿತಾವಧಿಯನ್ನು 15 ವರ್ಷಗಳಿಗೆ ಮತ್ತು ಖಾಸಗಿ ವಾಹನಗಳ ಜೀವಿತಾವಧಿಯನ್ನು 20 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ ಮತ್ತು ನಂತರ ಇವುಗಳನ್ನು ಗುಜರಿಗೆ ಹಾಕಬೇಕಾಗುತ್ತದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ತನ್ನ ಮುಂಗಡಪತ್ರ ಭಾಷಣದಲ್ಲಿ ನೂತನ ನೀತಿಯನ್ನು ಪ್ರಕಟಿಸಿದ್ದರು.