ಟಿಆರ್‌ಪಿಗೆ ಹಪಹಪಿಸುವರು ನನ್ನನ್ನು ಅಪರಾಧಿ ಎಂದು ಘೋಷಿಸಿದ್ದರು: ಮೊದಲ ಹೇಳಿಕೆ ಬಿಡುಗಡೆಗೊಳಿಸಿದ ದಿಶಾ ರವಿ

Update: 2021-03-13 16:45 GMT

ಹೊಸದಿಲ್ಲಿ,ಮಾ.13: ಕಳೆದ ತಿಂಗಳು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್ ಪ್ರಕರಣದಲ್ಲಿ ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ ದಿಶಾ ರವಿ (22) ಜೈಲಿನಿಂದ ಬಿಡುಗಡೆಗೊಂಡ ಬಳಿಕ ತನ್ನ ಮೊದಲ ಹೇಳಿಕೆಯನ್ನು ಶನಿವಾರ ಬಿಡುಗಡೆಗೊಳಿಸಿದ್ದಾರೆ.

  ತನ್ನ ಸಾಮಾಜಿಕ ಮಾಧ್ಯಮ ಪೇಜ್‌ಗಳಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ತನ್ನ ಬಂಧನ ಮತ್ತು ದಿಲ್ಲಿಯಲ್ಲಿ ಕಸ್ಟಡಿಯಲ್ಲಿ ಅನುಭವಗಳ ಬಗ್ಗೆ ವಿವರಿಸಿದ್ದಾರೆ. ತನ್ನ ಸ್ವಾಯತ್ತೆಯನ್ನು ಉಲ್ಲಂಘಿಸಲಾಗಿತ್ತು ಮತ್ತು ಟಿಆರ್‌ಪಿಗಾಗಿ ಸುದ್ದಿ ವಾಹಿನಿಗಳನ್ನು ತನ್ನನ್ನು ಅಪರಾಧಿ ಎಂದು ಘೋಷಿಸಿಬಿಟ್ಟಿದ್ದವು ಎಂದಿದ್ದಾರೆ.

‘ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಬದುಕುಳಿಯಲು ಈಗ ಏನು ನಡೆಯುತ್ತಿದೆಯೋ ಅದು ನನ್ನೊಂದಿಗೆ ನಡೆಯುತ್ತಿಲ್ಲ ಎಂದು ಬಲವಂತದಿಂದ ಭಾವಿಸಿಕೊಳ್ಳುವುದೊಂದೇ ನನಗಿದ್ದ ಮಾರ್ಗವಾಗಿತ್ತು. 2021,ಫೆ.13ರಂದು ಪೊಲೀಸರು ನನ್ನ ಮನೆ ಬಾಗಿಲು ಬಡಿದಿರಲಿಲ್ಲ,ಅವರು ನನ್ನ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಕಿತ್ತುಕೊಂಡಿರಲಿಲ್ಲ ಮತ್ತು ಅವರು ನನ್ನನ್ನು ಬಂಧಿಸಿರಲಿಲ್ಲ ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ ’ಎಂದು ದಿಶಾ ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ತನ್ನ ಮೊದಲ ವಿಚಾರಣೆಯ ಸಂದರ್ಭ ತನಗೆ ವಕೀಲರ ನೆರವನ್ನೂ ಒದಗಿಸಿರಲಿಲ್ಲ ಮತ್ತು ಐದು ದಿನಗಳ ಪೊಲೀಸ್ ಕಸ್ಟಡಿಗೆ ತನ್ನನ್ನು ನೀಡಲಾಗಿತ್ತು. ಇದು ಕಾನೂನು ಮತ್ತು ನಾಗರಿಕ ಹಕ್ಕುಗಳ ತಜ್ಞರಿಗೂ ದಿಗಿಲನ್ನುಂಟು ಮಾಡಿತ್ತು ಎಂದು ನೆನಪಿಸಿಕೊಂಡಿರುವ ದಿಶಾ,‘ನಂತರದ ದಿನಗಳಲ್ಲಿ ನನ್ನ ಸ್ವಾಯತ್ತೆಯನ್ನು ಉಲ್ಲಂಘಿಸಿದ್ದು,ಸುದ್ದಿಗಳ ವರದಿಯಲ್ಲಿ ನನ್ನ ಚಿತ್ರವನ್ನು ಪದೇ ಪದೇ ತೋರಿಸುತ್ತಿದ್ದುದು,ನ್ಯಾಯಾಲಯದಲ್ಲಿ ಅಲ್ಲ...ಟಿಆರ್‌ಪಿಗೆ ಹಪಹಪಿಸುವವರು ನನ್ನ ಚಟುವಟಿಕೆಗಳನ್ನು ಅಪರಾಧವೆಂದು ಘೋಷಿಸಿದ್ದು ಇವೆಲ್ಲ ನನಗೆ ಅಚ್ಚರಿಯನ್ನು ಮೂಡಿಸಿರಲಿಲ್ಲ. ತಮ್ಮ ತೃಪ್ತಿಗಾಗಿ ಅವರು ನನ್ನ ಬಗ್ಗೆ ಸೃಷ್ಟಿಸಿದ್ದ ಅಮೂರ್ತತೆಗಳ ಅರಿವಿಲ್ಲದೆ ನಾನು ಜೈಲಿನಲ್ಲಿ ಕುಳಿತಿದ್ದೆ ’ಎಂದಿದ್ದಾರೆ.

 ಜೈಲು ಕೋಣೆಯಲ್ಲಿನ ಪ್ರತಿಯೊಂದು ನಿಮಿಷ ಮತ್ತು ಪ್ರತಿಯೊಂದು ಗಂಟೆಯ ಬಗ್ಗೆ ತನಗೆ ಅರಿವಿತ್ತು ಮತ್ತು ಈ ಗ್ರಹದ ಉಳಿವಿಗಾಗಿ ಅತ್ಯಂತ ಮೂಲ ವಿಷಯಗಳ ಬಗ್ಗೆ ಯೋಚಿಸುವುದೂ ಯಾವಾಗಿನಿಂದ ಅಪರಾಧವಾಗಿದೆ ಎಂದು ತಾನು ಅಚ್ಚರಿ ಪಟ್ಟುಕೊಂಡಿದ್ದೆ. ರೈತರಾಗಿದ್ದ ತನ್ನ ಅಜ್ಜ ಮತ್ತು ಅಜ್ಜಿ ತಾನು ಹವಾಮಾನ ಕಾರ್ಯಕರ್ತೆಯಾಗಲು ಮೂಲ ಪ್ರೇರಣೆಯಾಗಿದ್ದರು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News