×
Ad

ಡ್ರೋನ್‌ಗಳ ಹಾರಾಟಕ್ಕೆ ಕಡಿವಾಣ: ಐದು ಲಕ್ಷ ರೂ.ವರೆಗೆ ದಂಡ

Update: 2021-03-13 22:39 IST

ಹೊಸದಿಲ್ಲಿ,ಮಾ.13: ದಿಲ್ಲಿಯ ವಿಜಯ ಚೌಕ್‌ನಲ್ಲಿ,ಗೃಹ ಸಚಿವಾಲಯವು ಅಧಿಸೂಚಿಸಿರುವ ಸುತ್ತುಮುತ್ತಲಿನ ವ್ಯೂಹಾತ್ಮಕ ಪ್ರದೇಶಗಳಲ್ಲಿ,ರಾಜ್ಯ ರಾಜಧಾನಿಗಳಲ್ಲಿಯ ಸೆಂಟ್ರಲ್ ಸೆಕ್ರೆಟರಿಯೇಟ್‌ಗಳ ಬಳಿ ಮತ್ತು ಪರಿಸರ ಸೂಕ್ಷ್ಮ ವಲಯಗಳಲ್ಲಿ ಇನ್ನು ಮುಂದೆ ಡ್ರೋನ್‌ಗಳ ಹಾರಾಟವನ್ನು ನಡೆಸುವಂತಿಲ್ಲ. ಇದನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ 50,000 ರೂ.ಗಳ ದಂಡವನ್ನು ವಿಧಿಸಲಾಗುವುದು.

ಸರಕಾರವು ಶುಕ್ರವಾರ ಅಧಿಸೂಚಿಸಿರುವ ಮಾನವರಹಿತ ವಿಮಾನಗಳ ವ್ಯವಸ್ಥೆ ನಿಯಮಗಳು-2021ರಂತೆ ಮುಂಬೈ, ದಿಲ್ಲಿ, ಚೆನ್ನೈ, ಕೋಲ್ಕತಾ,ಬೆಂಗಳೂರು ಮತ್ತು ಹೈದರಾಬಾದ್‌ಗಳ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಐದು ಕಿ.ಮೀ.ಅಂತರದೊಳಗೆ ಹಾಗೂ ಯಾವುದೇ ನಾಗರಿಕ,ಖಾಸಗಿ ಅಥವಾ ರಕ್ಷಣಾ ಇಲಾಖೆಯ ವಿಮಾನ ನಿಲ್ದಾಣಗಳಿಂದ ಮೂರು ಕಿ.ಮೀ.ಅಂತರದೊಳಗೆ ಡ್ರೋನ್‌ಗಳ ಹಾರಾಟವನ್ನು ನಡೆಸುವಂತಿಲ್ಲ.

ನಿಯಂತ್ರಣ ರೇಖೆ,ವಾಸ್ತವ ನಿಯಂತ್ರಣ ರೇಖೆ ಮತ್ತು ವಾಸ್ತವ ಭೂಮಿ ಸ್ಥಾನ ರೇಖೆ ಸೇರಿದಂತೆ ಅಂತರರಾಷ್ಟ್ರೀಯ ಗಡಿಗಳಿಂದ 25 ಕಿ.ಮೀ.ಅಂತರದಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಿರುವ ನಿಯಮಗಳು,ಸ್ಥಳೀಯ ಸೇನಾ ಕಚೇರಿಗಳಿಂದ ಪೂರ್ವಾನುಮತಿಯಿಲ್ಲದೆ ಮಿಲಿಟರಿ ಸ್ಥಾವರಗಳು ಅಥವಾ ಮಿಲಿಟರಿ ಚಟುವಟಿಕೆಗಳ ನಡೆಯುವ ಸ್ಥಳಗಳಲ್ಲಿ ಡ್ರೋನ್‌ಗಳ ಹಾರಾಟವನ್ನು ನಿಷೇಧಿಸಿದೆ.

ಭಾರತದ ಡ್ರೋನ್ ಉದ್ಯಮ ಬೆಳವಣಿಗೆಯಾಗುವ ಮುನ್ನಂದಾಜಿನ ನಡುವೆಯೇ ನೂತನ ನಿಯಮಗಳು ಹೊರಬಿದ್ದಿವೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕಣ್ಗಾವಲು ಉದ್ದೇಶದಿಂದ ಹಿಡಿದು ಮಿಡತೆಗಳ ದಾಳಿಯನ್ನು ನಿಯಂತ್ರಿಸುವಲ್ಲಿ ನೆರವಾಗುವವರೆಗೆ ಆಡಳಿತಕ್ಕೆ ಪೂರಕವಾಗಿ ಡ್ರೋನ್‌ಗಳ ನಿಯೋಜನೆಯನ್ನು ಕೇಂದ್ರ ಸರಕಾರವು ಹೆಚ್ಚಿಸುತ್ತಲೇ ಇದೆ.

ತೂಕದ ಆಧಾರದಲ್ಲಿ ಡ್ರೋನ್‌ಗಳನ್ನು ವರ್ಗೀಕರಿಸಿರುವ ನಿಯಮಗಳು ಅವುಗಳ ಆಮದು,ತಯಾರಿಕೆ,ವ್ಯಾಪಾರ,ಒಡೆತನ ಅಥವಾ ನಿರ್ವಹಣೆಗೆ ಅರ್ಹರ ಪಟ್ಟಿ,ಡ್ರೋನ್‌ಗಳನ್ನು ಕಾರ್ಯಾಚರಿಸಬಹುದಾದ ಪ್ರದೇಶಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದರೆ ವಿಧಿಸಲಾಗುವ ದಂಡಗಳ ವಿವರಗಳನ್ನು ಒಳಗೊಂಡಿವೆ.

 ಡ್ರೋನ್‌ಗಳನ್ನು ಆಮದು ಮಾಡಲು,ತಯಾರಿಸಲು,ಮಾರಾಟ ಮಾಡಲು,ಒಡೆತನ ಹೊಂದಲು ಅಥವಾ ಅವುಗಳನ್ನು ನಿರ್ವಹಿಸಲು ವ್ಯಕ್ತಿಗಳು ಮತ್ತು ಕಂಪನಿಗಳು ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯದ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಯಾವುದೇ ವ್ಯಕ್ತಿ ಭಾರತೀಯ ಪ್ರಜೆಯಾಗಿದ್ದು,18 ವರ್ಷಗಳಿಗೂ ಹೆಚ್ಚು ವಯಸ್ಸಾಗಿರಬೇಕು. ಕಂಪನಿಯಾದರೆ ಅದು ಭಾರತದಲ್ಲಿ ನೋಂದಣಿಯಾಗಿರಬೇಕು ಮತ್ತು ತನ್ನ ಉದ್ಯಮದ ಪ್ರಧಾನ ಸ್ಥಳವನ್ನು ಭಾರತದಲ್ಲಿ ಹೊಂದಿರಬೇಕು ಹಾಗೂ ಆಡಳಿತ ಮಂಡಳಿಯಲ್ಲಿ ಕನಿಷ್ಠ ಮೂರನೇ ಎರಡು ಭಾಗದಷ್ಟು ನಿರ್ದೇಶಕರು ಭಾರತೀಯ ಪ್ರಜೆಗಳಾಗಿರಬೇಕು.

ಉಲ್ಲಂಘನೆಗಳ ಸ್ವರೂಪವನ್ನು ಅವಲಂಬಿಸಿ 25,000 ರೂ.ಗಳಿಂದ ಐದು ಲ.ರೂ.ವರೆಗೆ ದಂಡಗಳನ್ನು ನಿಯಮಗಳು ನಿರ್ದಿಷ್ಟಗೊಳಿಸಿವೆ. ಅಧಿಕೃತ ಆಮದುದಾರರನ್ನು ಹೊರತುಪಡಿಸಿ ಇತರ ಯವುದೇ ವ್ಯಕ್ತಿಯು ಡ್ರೋನ್ ಅಥವಾ ಅದರ ಬಿಡಿಭಾಗಗಳನ್ನು ಆಮದುಗೊಳಿಸುವಂತಿಲ್ಲ ಎಂಬ ಕಲಂ (10)ರ ಉಪ ಕಲಂ (1)ರ ಉಲ್ಲಂಘನೆಗಾಗಿ ಐದು ಲ.ರೂ.ಗಳ ದಂಡವನ್ನು ವಿಧಿಸಲಾಗುವುದು. ಅಧಿಕೃತ ತಯಾರಕರು ಮಾತ್ರ ಡ್ರೋನ್‌ಗಳನ್ನು ತಯಾರಿಸಬಹುದು ಎಂಬ ಕಲಂ (11)ರ ಉಲ್ಲಂಘನೆಗೂ ಐದು ಲ.ರೂ.ಗಳ ದಂಡವನ್ನು ವಿಧಿಸಲಾಗುವುದು. ಹಾರಾಟವನ್ನು ನಿಷೇಧಿಸಲಾಗಿರುವ ಪ್ರದೇಶಗಳಲ್ಲಿ ಡ್ರೋನ್ ಕಾರ್ಯಾಚರಣೆಯನ್ನು ನಡೆಸುವ ವ್ಯಕ್ತಿಗಳಿಗೆ 50,000 ರೂ.ಗಳ ದಂಡವನ್ನು ವಿಧಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News