×
Ad

ಹೊಸ ಅಲೆ ಇನ್ನೂ ಇಲ್ಲದಿರಬಹುದು,ಪ್ರಕರಣಗಳ ಏರಿಕೆ ತಡೆಯಲು ಲಸಿಕೆ, ಕೋವಿಡ್ ಶಿಷ್ಟಾಚಾರ ಪಾಲನೆ ಮುಖ್ಯ: ವಿಜ್ಞಾನಿಗಳು

Update: 2021-03-13 22:46 IST
ಸಾಂದರ್ಭಿಕ ಚಿತ್ರ  
 

ಹೊಸದಿಲ್ಲಿ,ಮಾ.13: ಕಳೆದ 83 ದಿನಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಹೊಸ ಕೊರೋನವೈರಸ್ ಪ್ರಕರಣಗಳು ಶನಿವಾರ ಭಾರತದಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ದೇಶವು ಸಾಂಕ್ರಾಮಿಕ ಹೊಸ ಅಲೆಯತ್ತ ಸಾಗುತ್ತಿರಬಹುದು ಎಂದು ಹೇಳಿರುವ ವಿಜ್ಞಾನಿಗಳು, ಆದರೆ ಗರಿಷ್ಠ ಜನರಿಗೆ ಲಸಿಕೆಗಳನ್ನು ನೀಡುವ ಮತ್ತು ಕೋವಿಡ್-19 ಶಿಷ್ಟಾಚಾರಗಳ ಪಾಲನೆಯ ಮೂಲಕ ಪ್ರಕರಣಗಳು ಹೆಚ್ಚುವುದನ್ನು ತಡೆಯಬಹುದಾಗಿದೆ ಎಂದಿದ್ದಾರೆ.

ಹೊಸ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು,ಶುಕ್ರವಾರ 23,285 ಪ್ರಕರಣಗಳು ವರದಿಯಾಗಿದ್ದರೆ ಶನಿವಾರ ಈ ಸಂಖ್ಯೆ 24,882ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ವರದಿ ಮಾಡಿದೆ. 26,624 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿದ್ದ ಡಿ.20ರ ನಂತರ ಇದು ಗರಿಷ್ಠ ದೈನಂದಿನ ಪ್ರಕರಣಗಳ ಸಂಖ್ಯೆಯಾಗಿದೆ.

ಎಚ್ಚರಿಕೆಯ ಗಂಟೆ ಮೊಳಗುತ್ತಿರುವುದರೊಂದಿಗೆ ಕೊರೋನವೈರಸ್ ಸಾಂಕ್ರಾಮಿಕದ ಹೊಸ ಅಲೆ ಆರಂಭವಾಗಿದೆಯೇ ಎಂಬ ಆತಂಕ ಮನೆಮಾಡಿದೆ. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರಾದರೂ,ಇದನ್ನು ತಡೆಯಲು ಕೋವಿಡ್-19 ಶಿಷ್ಟಾಚಾರಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡಿಕೆಯ ಅಗತ್ಯಕ್ಕೆ ಒತ್ತು ನೀಡಿದ್ದಾರೆ.

ಹೆಚ್ಚು ವೇಗವಾಗಿ ಹರಡುವ ಕೊರೋನವೈರಸ್ ಪ್ರಭೇದಗಳಿಂದಾಗಿ ಹೊಸ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆಯೇ ಅಥವಾ ಜನರಲ್ಲಿ ಮುಂಜಾಗ್ರತೆ ಕ್ರಮಗಳ ಕೊರತೆ ಇದಕ್ಕೆ ಕಾರಣವೇ ಎನ್ನುವುದನ್ನು ತಿಳಿದುಕೊಳ್ಳಲು ತನ್ನ ಸಂಸ್ಥೆಯ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ, ಸಾಂಕ್ರಾಮಿಕದ ಹೊಸ ಅಲೆ ಏಳುತ್ತಿದೆಯೇ ಎನ್ನುವುದು ನಿಖರವಾಗಿ ಗೊತ್ತಾಗಿಲ್ಲವಾದರೂ ಕೆಲವು ವಿಷಯಗಳಂತೂ ಸ್ಪಷ್ಟವಾಗಿವೆ ಎಂದು ದಿಲ್ಲಿಯ ಸಿಎಸ್‌ಐಆರ್ ಇನ್‌ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿಯ ನಿರ್ದೇಶಕ ಅನುರಾಗ್ ಅಗರವಾಲ್ ಹೇಳಿದರು.

‘ಕೋವಿಡ್ ಶಿಷ್ಟಾಚಾರಗಳ ಪಾಲನೆ ಮತ್ತು ಲಸಿಕೆ ನೀಡಿಕೆ ಅಭಿಯಾನವನ್ನು ತೀವ್ರಗೊಳಿಸುವುದು ಸಾಂಕ್ರಾಮಿಕವನ್ನು ತಡೆಯಲು ನಮಗಿರುವ ಅತ್ಯುತ್ತಮ ಮಾರ್ಗಗಳಾಗಿವೆ ’ ಎಂದರು.

ಹೊಸ ಪ್ರಭೇದಗಳು ಪತ್ತೆಯಾಗಿರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಅಷ್ಟು ತೀವ್ರವಾಗಿ ಹೆಚ್ಚುತ್ತಿಲ್ಲ. ಇದು ಭಾರತದಲ್ಲಿ ಪತ್ತೆಯಾಗಿರುವ ಹೊಸ ಪ್ರಭೇದಗಳು ಅತ್ಯಂತ ಸಾಂಕ್ರಾಮಿಕವಲ್ಲ ಎನ್ನುವುದನ್ನು ಸೂಚಿಸುತ್ತಿದೆ ಎಂದು ಹೇಳಿದ ಪಂಜಾಬಿನ ಫಗ್ವಾರಾದ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿಯ ಅಪ್ಲೈಡ್ ಮೆಡಿಕಲ್ ಸೈನ್ಸಸ್ ವಿಭಾಗದ ಮುಖ್ಯಸ್ಥೆ ಹಾಗೂ ಸೀನಿಯರ್ ಡೀನ್ ಮೋನಿಕಾ ಗುಲಾಟಿ ಅವರು,ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಹೊಸ ಪ್ರಭೇದಗಳೊಂದಿಗೆ ಸಾರ್ವಜನಿಕರ ಉದಾಸೀನ ಪ್ರವೃತ್ತಿಯೂ ಕಾರಣವಾಗಿರಬಹುದು. ಹೊಸ ಪ್ರಭೇದಗಳು ಪತ್ತೆಯಾಗಿರುವ ದೇಶಗಳಲ್ಲಿ ಅವು ಮೂಲ ಪ್ರಭೇದಕ್ಕಿಂತ ಹೆಚ್ಚು ಮಾರಣಾಂತಿಕವಾಗಿರುವುದು ಕಂಡು ಬಂದಿದೆ. ಭಾರತದಲ್ಲಿ ಹೊಸ ಪ್ರಕರಣಗಳು ಅಷ್ಟು ತೀವ್ರವಾಗಿ ಹೆಚ್ಚುತ್ತಿಲ್ಲ. ಹೆಚ್ಚಿನ ಜನರಿಗೆ ಲಸಿಕೆ ನೀಡಿಕೆಯಿಂದ ಪ್ರಸರಣ ಸರಣಿಯನ್ನು ತುಂಡರಿಸಿರುವುದು ಮತ್ತು ಹಾಲಿ ಹೊಸ ಪ್ರಭೇದವು ಹೆಚ್ಚು ಸಾಂಕ್ರಾಮಿಕವಾಗಿಲ್ಲದಿರುವುದು ಸೇರಿದಂತೆ ಹಲವಾರು ಅಂಶಗಳು ಇದಕ್ಕೆ ಕಾರಣವಾಗಿರಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News