“ಭಾರತದ ರಾಷ್ಟ್ರಧ್ವಜ ವಿನ್ಯಾಸಗೊಳಿಸಿದ ಪಿಂಗಾಳಿ ವೆಂಕಯ್ಯರಿಗೆ ಮರಣೋತ್ತರ ಭಾರತ ರತ್ನ ನೀಡಿ”
ಅಮರಾವತಿ, ಮಾ. 13: ರಾಷ್ಟ್ರಧ್ವಜ ವಿನ್ಯಾಸಗೊಳಿಸಿದ ಪಿಂಗಾಳಿ ವೆಂಕಯ್ಯ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಶುಕ್ರವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಇಲ್ಲಿ 75 ವಾರಗಳ ದೀರ್ಘ ಕಾಲದ ‘‘ಅಝಾದಿ ಕಾ ಅಮೃತ್ ಮಹೋತ್ಸವ’’ದ ಉದ್ಘಾಟನೆ ಸಂದರ್ಭ ಪಿಂಗಾಳಿ ವೆಂಕಯ್ಯ ಅವರ ಪುತ್ರಿ ಘಂಟಸಾಲಾ ಸೀತಾಮಹಾಲಕ್ಷ್ಮೀ ಅವರನ್ನು ಗೌರವಿಸಿದರು. ಸೀತಾಮಹಾಲಕ್ಷ್ಮೀ ಅವರಿಗೆ 75 ಲಕ್ಷ ರೂಪಾಯಿ ನೀಡಿ ಗೌರವಿಸಿದ ಜಗನ್ ಮೋಹನ್ ರೆಡ್ಡಿ, ಪಿಂಗಾಳಿ ವೆಂಕಯ್ಯ ಅವರಿಗೆ ಅತ್ಯುಚ್ಚ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು.
‘‘ಅಝಾದಿ ಕಾ ಅಮೃತ್ ಮಹೋತ್ಸವ್’’ ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯ ನೆನಪಿನ ಕೇಂದ್ರ ಸರಕಾರದ ಕಾರ್ಯಕ್ರಮವಾಗಿದೆ. 1921 ಎಪ್ರಿಲ್ 1ರಂದು ಮಹಾತ್ಮಾ ಗಾಂಧಿ ಅವರು ವಿಜಯವಾಡ ನಗರಕ್ಕೆ ಆಗಮಿಸಿದ ಸಂದರ್ಭ ಕೃಷ್ಣಾ ಜಿಲ್ಲೆಯವರಾದ ಪಿಂಗಾಳಿ ವೆಂಕಯ್ಯ ನಾಯ್ಡು ಅವರು ತಾನು ವಿನ್ಯಾಸಗೊಳಿಸಿದ ರಾಷ್ಟ್ರಧ್ವಜವನ್ನು ಅವರಿಗೆ ನೀಡಿದ್ದರು. ಪಿಂಗಾಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದ್ದ ತ್ರಿವರ್ಣ ಧ್ವಜವನ್ನು 1947 ಜುಲೈ 22ರಂದು ಸಂಸತ್ ರಾಷ್ಟ್ರ ಧ್ವಜವಾಗಿ ಸ್ವೀಕರಿಸಿತ್ತು.