ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಜಗನ್ನಾಥನ್ ನಿಧನ
ಚೆನ್ನೈ: ನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಎಸ್.ಪಿ. ಜಗನ್ನಾಥನ್ ಬೆಳಗ್ಗೆ 10ರ ಸುಮಾರಿಗೆ ನಿಧನರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಮನೆಯಲ್ಲಿ ಪ್ರಜ್ಞಾಹೀನಸ್ಥಿತಿಯಲ್ಲಿ ಕಂಡುಬಂದಿದ್ದರು. ಆಗ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಇಂದು ಬೆಳಗ್ಗೆ ಜಗನ್ನಾಥನ್ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ ಎಂದು ನಿರ್ದೇಶಕ ಅರುಮುರುಗಕುಮಾರ್ ತಿಳಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ನಿರ್ದೇಶಕರಾಗಿದ್ದ ಜಗನ್ನಾಥನ್ ಗೆ 61 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳ ಹಿಂದೆ ಜಗನ್ನಾಥನ್ ತಮ್ಮ ಮನೆಯಲ್ಲಿ ಪ್ರಜ್ಞಾಹೀನಸ್ಥಿತಿಯಲ್ಲಿರುವುದನ್ನು ಓರ್ವ ಸಹಾಯಕ ನಿರ್ದೇಶಕರು ಪತ್ತೆಹಚ್ಚಿದ್ದರು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಗನ್ನಾಥನ್ ಅವರು ಅಸ್ವಸ್ಥರಾಗುವ ಮೊದಲು ಮುಂಬರುವ ಚಿತ್ರ ಲಾಭಂನ ಸಂಕಲನದ ಉಸ್ತುವಾರಿ ನೋಡಿಕೊಳ್ಲುತ್ತಿದ್ದರು. ಈ ಚಿತ್ರದಲ್ಲಿ ವಿಜಯ ಸೇತುಪಥಿ ಹಾಗೂ ಶೃತಿ ಹಾಸನ್ ಪ್ರಮುಖ ಪಾತ್ರದಲ್ಲಿದ್ದಾರೆ.
ಜಗನ್ನಾಥನ್ 2003ರಲ್ಲಿ ನಿರ್ದೇಶಕರಾಗಿ ವೃತ್ತಿಜೀವನ ಆರಂಭಿಸಿದ್ದು, ಆಗ ತೆರೆ ಕಂಡಿದ್ದ ಐಯಾರ್ಕೈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.