×
Ad

ದಿಲ್ಲಿಯಿಂದ ಏಳು ತಿಂಗಳುಗಳ ಕಾಲ್ನಡಿಗೆ ಪಯಣದ ಬಳಿಕ ಜಾರ್ಖಂಡ್‌ನ ಮನೆಗೆ ತಲುಪಿದ ವಲಸೆ ಕಾರ್ಮಿಕ !

Update: 2021-03-14 21:00 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.23: ಜಾರ್ಖಂಡ್‌ನ 54 ವರ್ಷ ವಯಸ್ಸಿನ ವಲಸೆ ಕಾರ್ಮಿಕ ಬೆರ್ಜೊಮ್ ಬಮ್ಡಾ ಪಹಾಡಿಯಾ ಕಳೆದ ವರ್ಷ ದಿಲ್ಲಿಯಿಂದ ಕಾಲ್ನಡಿಗೆಯಲ್ಲಿ ಪ್ರಯಾಣವನ್ನು ಆರಂಭಿಸಿದವನು ಏಳು ತಿಂಗಳುಗಳ ಬಳಿಕ ಜಾರ್ಖಂಡ್‌ನಲ್ಲಿರುವ ಮನೆಯನ್ನು ತಲುಪಿದ್ದಾನೆ. ಬೆರ್ಜೊಮ್‌ನ ಆಗಮನವು ಆತನ ಕುಟುಂಬದಲ್ಲಿ ಹರ್ಷವನ್ನು ಮೂಡಿಸಿದೆ.

ದಿಲ್ಲಿಯಲ್ಲಿ ಕಟ್ಟಡ ಕಾರ್ಮಿಕನಾಗಿದ್ದ ಪಹಾಡಿಯಾನಿಗೆ ಆತನ ಗುತ್ತಿಗೆದಾರ ಕೂಲಿ ಹಣ ಕೂಡಾ ನೀಡದೆ, ಹೊರಹಾಕಿದ್ದ. ಅಲ್ಲದೆ ಪಹಾಡಿಯಾ ತನ್ನ ಹಳ್ಳಿಯಿಂದ ಬರುವಾಗ ಹಣವನ್ನು ಕಿತ್ತುಕೊಂಡಿದ್ದ. ಕೈಯಲ್ಲಿ ಬಿಡಿಗಾಸೂ ಇಲ್ಲದ ಬೆರ್ಜೊಮ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಜಾರ್ಖಂಡ್‌ನಲ್ಲಿರುವ ತನ್ನ ಹಳ್ಳಿಯೆಡೆಗೆ ಕಾಲ್ನಡಿಗೆಯ ಪ್ರಯಾಣವನ್ನು ಆರಂಭಿಸಿದ್ದ.

ದಿಲ್ಲಿಯಿಂದ 1200 ಕಿ.ಮೀ. ನಡೆದು ಸಾಹೇಬ್‌ಗಂಜ್ ಜಿಲ್ಲೆಯಲ್ಲಿರುವ ತನ್ನ ಊರಾದ ಅಮರ್‌ಬಿತಾ ಗ್ರಾಮವನ್ನು ಪಹಾಡಿಯಾ ಮಾರ್ಚ್ 13ರಂದು ತಲುಪಿದ್ದ.

ತನ್ನ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಪಹಾಡಿಯಾನಿಗೆ ಮಧ್ಯವರ್ತಿಯೊಬ್ಬ ಉತ್ತಮ ವೇತನದ ಕೆಲಸದ ಭರವಸೆ ನೀಡಿದ್ದರಿಂದ ಆತ ತನ್ನ ಹಳ್ಳಿಯ ಇತರ ಹತ್ತುಮಂದಿಯೊಂದಿಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ದಿಲ್ಲಿಗೆ ತೆರಳಿದ್ದ. ಲಾಕ್‌ಡೌನ್ ಹೇರಿಕೆಗೆ ಮುನ್ನ ಪಹಾಡಿಯಾ ದಿಲ್ಲಿಯಲ್ಲಿ 20-25 ದಿನಗಳ ಕಾಲ ಕೆಲಸ ಮಾಡಿದ್ದ. ಆದರೆ ದಲ್ಲಾಳಿಯು ಆತನಿಗೆ ಒಂದು ಬಿಡಿಗಾಸನ್ನೂ ಕೂಡಾ ನೀಡಿರಲಿಲ್ಲ. ಕೇವಲ ದಿನಕ್ಕೆ ಎರಡು ಹೊತ್ತಿನ ಊಟ ಹಾಗೂ ಉಳಿದುಕೊಳ್ಳಲು ಸ್ಥಳವನ್ನಷ್ಟೇ ಒದಗಿಸಲಾಗಿತ್ತು. ‘‘ಮಾರ್ಚ್‌ನಲ್ಲಿ ಲಾಕ್‌ಡೌನ್ ಹೇರಿದ ಬಳಿಕ ದಲ್ಲಾಳಿಯು, ಪಹಾಡಿಯಾ ಮನೆಯಿಂದ ಬರುವಾಗ ತಂದಿದ್ದ ಏಳು ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದ, ಇದರ ಜೊತೆಗೆ ನನ್ನ ಸೊತ್ತುಗಳನ್ನು ಹಾಗೂ ಆಧಾರ್‌ಕಾರ್ಡ್ ಕೂಡಾ ಕಸಿದುಕೊಂಡಿದ್ದ’’ ಎಂದು ಪಹಾಡ್ ಟೆಲಿಗ್ರಾಫ್ ಪತ್ರಿಕೆಯ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾನೆ.

ಆನಂತರ ಪಹಾಡಿಯಾ ಬೀದಿಬದಿಯಲ್ಲೇ ವಾಸಮಾಡಬೇಕಾಯಿತು. ರೈಲು ಟಿಕೆಟ್ ಖರೀದಿಸಲು ಆತನ ಬಳಿಯಲ್ಲಿ ಹಣವಿಲ್ಲದೆ ಇದ್ದುದರಿಂದ ಆತ ಕಾಲ್ನಡಿಗೆಯಲ್ಲಿಯೇ ಪ್ರಯಾಣ ಆರಂಭಿಸಿದ್ದ. ಆತನಿಗೆ ಬುಡಕಟ್ಟು ಸಂತಾಲಿ ಭಾಷೆ ಮಾತ್ರ ಬರುತ್ತಿದ್ದುದರಿಂದ ಉಳಿದ ಜನರೊಂದಿಗೆ ತನ್ನ ಸಂಕಷ್ಟವನ್ನು ಹೇಳಲೂ ಸಾಧ್ಯವಾಗಿರಲಿಲ್ಲ

ರೈಲು ಮಾರ್ಗದಲ್ಲಿಯೇ ನಡೆಯುತ್ತಲ್ಲೇ ಕಾಲ್ನಡಿಗೆ ಪ್ರಯಾಣ ಆರಂಭಿಸಿದ ತಾನು ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷೆ ಬೇಡುತ್ತಿದ್ದೆ ಎಂದು ಪಹಾಡಿಯಾ ತಿಳಿಸಿದ್ದಾನೆ. ಮಾರ್ಚ್ 11ರಂದು ಪಹಾಡಿಯಾ ಧನಾಬಾದ್ ಜಿಲ್ಲೆಯ ಮಹುಡಾದಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದಾಗ, ಎನ್‌ಜಿಓ ಸಂಸ್ಥೆ ‘ರೋಟಿಬ್ಯಾಂಕ್ ’ನ ಕಾರ್ಯಕರ್ತರು ಆತ ಹಸಿವಿನಿಂದ ಕಂಗಾಲಾಗಿರುವುದನ್ನು ಗಮನಿಸಿದರು. ಆನಂತರ ಅವರು ಪಹಾಡಿಯಾನಿಗೆ ಸಾಹೇಬ್‌ಗಂಜ್‌ವರೆಗೆ ಬಸ್‌ಟಿಕೆಟ್‌ನ ವ್ಯವಸ್ಥೆ ಮಾಡಿದರಲ್ಲದೆ, ಹೊಸ ಬಟ್ಟೆಗಳನ್ನು ಕೂಡಾ ಕೊಡಿಸಿದರು. ವಿಶ್ರಾಂತಿಗಾಗಿ ಕೊಠಡಿಯನ್ನು ಕೂಡಾ ಒದಗಿಸಿದರು.

ಗುತ್ತಿಗೆದಾರನೊಬ್ಬನ ವಾಹನದಲ್ಲಿ ಪಹಾಡಿಯಾನನ್ನು ಆತನ ಮಹುಡಾ ಜಿಲ್ಲೆಗೆ ಮಾರ್ಚ್ 13ರಂದು ತಲುಪಿಸಿದರು. ಎನ್‌ಜಿಓ ಸಂಸ್ಥೆಯ ಸದಸ್ಯರೊಬ್ಬರು ಕೂಡಾ ಆತನ ಜೊತೆಗಿದ್ದರು. ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುವುದು ಹಾಗೂ ಸಾಧ್ಯವಾದಲ್ಲಿ ಪಹಾಡಿಯಾನನ್ನು ದಿಲ್ಲಿಗೆ ಕರೆದೊಯ್ದ ದಲ್ಲಾಳಿಯನ್ನು ಬಂಧಿಸಲಾಗುವುದು ಎಂದು ಸಾಹೇಬ್‌ಗಂಜ್ ಜಿಲ್ಲಾಧಿಕಾರಿ ರಾಮ್ ನಿವಾಸ್‌ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News