ಹಣಕಾಸು ನೀತಿಯಲ್ಲಿನ ತೀವ್ರ ಬದಲಾವಣೆಗಳು ಬಾಂಡ್ ಮಾರುಕಟ್ಟೆಯನ್ನು ಬುಡಮೇಲುಗೊಳಿಸುತ್ತವೆ
ಹೊಸದಿಲ್ಲಿ,ಮಾ.14: ಕೋವಿಡ್ ಮಹಾಮಾರಿಯ ಹೊಡೆತದಿಂದ ದೇಶದ ಆರ್ಥಿಕತೆಯು ನಿಧಾನವಾಗಿ ಚೇತರಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು,ಪ್ರಸಕ್ತ ವ್ಯವಸ್ಥೆಯು ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ನೆರವಾಗಿರುವುದರಿಂದ ಭಾರತದ ಹಣಕಾಸು ನೀತಿ ಚೌಕಟ್ಟಿನಲ್ಲಿ ಯಾವುದೇ ತೀವ್ರ ಬದಲಾವಣೆಗಳು ಬಾಂಡ್ ಮಾರುಕಟ್ಟೆಯನ್ನು ಬುಡಮೇಲುಗೊಳಿಸಬಲ್ಲವು ಎಂದು ರವಿವಾರ ಎಚ್ಚರಿಕೆಯನ್ನು ನೀಡಿದ್ದಾರೆ.
2024-25ರ ವೇಳೆಗೆ ಭಾರತವನ್ನು ಐದು ಲಕ್ಷ ಕೋಟಿ ರೂ.ಗಳ ಆರ್ಥಿಕತೆಯನ್ನಾಗಿಸುವ ಸರಕಾರದ ಗುರಿಯು ಲೆಕ್ಕಾಚಾರಕ್ಕೆ ಬದಲಾಗಿ ಹೆಚ್ಚಿನ ಮಹತ್ವಾಕಾಂಕ್ಷೆಯಿಂದ ಕೂಡಿದೆ ಎಂದ ಅವರು,ಕೋವಿಡ್ ಬಿಕ್ಕಟ್ಟು ಆರಂಭಗೊಳ್ಳುವ ಮೊದಲೂ ಈ ಗುರಿಯನ್ನು ಸಾಧಿಸುವ ಬಗ್ಗೆ ಎಚ್ಚರಿಕೆಯಿಂದ ಲೆಕ್ಕಾಚಾರಗಳನ್ನು ಹಾಕಿರಲಿಲ್ಲ ಎಂದರು.
ಹಣಕಾಸು ನೀತಿ ಚೌಕಟ್ಟು ಹಣದುಬ್ಬರವನ್ನು ತಗ್ಗಿಸಲು ನೆರವಾಗಿದೆ ಮತ್ತು ಆರ್ಥಿಕತೆಯನ್ನು ಬೆಂಬಲಿಸಲು ಕೆಲವು ಹೊಂದಾಣಿಕೆಗಳಿಗೆ ಆರ್‌ಬಿಐಗೆ ಅವಕಾಶ ನೀಡಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಿಸಿದ ರಾಜನ್,ಇಂತಹ ಚೌಕಟ್ಟೊಂದು ಅಸ್ತಿತ್ವದಲ್ಲಿಲ್ಲದಿದ್ದರೆ ಇಷ್ಟೊಂದು ಬೃಹತ್ ವಿತ್ತೀಯ ಕೊರತೆಯನ್ನು ನಾವು ಹೇಗೆ ಎದುರಿಸುತ್ತಿದ್ದೆವು ಎನ್ನುವುದನ್ನು ಯೋಚಿಸುವುದೂ ಕಷ್ಟವಾಗುತ್ತಿತ್ತು ಎಂದರು. ಅವರು ಹಣಕಾಸು ನೀತಿ ಚೌಕಟ್ಟಿನಡಿ ಹಣದುಬ್ಬರವನ್ನು ಶೇ.2ರಿಂದ ಶೇ.6ರೊಳಗೆ ಸೀಮಿತಗೊಳಿಸಿರುವ ಗುರಿಯ ಪುನರ್‌ಪರಿಶೀಲನೆಯನ್ನು ನೀವು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದರು.
ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇ.2ರಿಂದ ಶೇ.6ರ ನಡುವೆ ಕಾಯ್ದುಕೊಳ್ಳುವ ಕಟ್ಟುಪಾಡನ್ನು ಹೊಂದಿದೆ. ಆರ್‌ಬಿಐ ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಬಡ್ಡಿದರಗಳನ್ನು ನಿರ್ಧರಿಸುವಾಗ ಈ ಗುರಿಯನ್ನು ಗಮನದಲ್ಲಿಟ್ಟುಕೊಂಡಿರುತ್ತದೆ.
2016,ಆಗಸ್ಟ್‌ನಲ್ಲಿ ನಿಗದಿಗೊಳಿಸಲಾಗಿದ್ದ ಹಾಲಿ ಮಧ್ಯಮಾವಧಿ ಹಣದುಬ್ಬರ ಗುರಿಯು ಮಾ.31ಕ್ಕೆ ಅಂತ್ಯಗೊಳ್ಳುತ್ತದೆ. ಎಪ್ರಿಲ್‌ನಿಂದ ಆರಂಭಗೊಳ್ಳುವ ಮುಂದಿನ ಐದು ವರ್ಷಗಳ ಅವಧಿಗೆ ಹೊಸ ಹಣದುಬ್ಬರ ಗುರಿಯನ್ನು ಈ ತಿಂಗಳು ಪ್ರಕಟಿಸುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ರಾಜನ್,ಹಣಕಾಸು ನೀತಿ ಚೌಕಟ್ಟಿನಲ್ಲಿ ಯಾವುದೇ ತೀವ್ರ ಬದಲಾವಣೆಯನ್ನು ಮಾಡಿದರೆ ಬಾಂಡ್ ಮಾರುಕಟ್ಟೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುವ ಅಪಾಯವಿದೆ. ಹಣದುಬ್ಬರವನ್ನು ತಗ್ಗಿಸಲು ಈ ಚೌಕಟ್ಟು ನೆರವಾಗಿದೆ,ಯಾವುದೇ ತೀವ್ರವಾದ ಬದಲಾವಣೆಯನ್ನು ಮಾಡಲು ಇದು ಸಕಾಲವಲ್ಲ ಎಂದರು.
ಸುಧಾರಣಾ ಕ್ರಮಗಳ ಕುರಿತಂತೆ ಅವರು,2021-22ರ ಮುಂಗಡಪತ್ರವು ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡಿದೆಯಾದರೂ ಗುರಿಸಾಧನೆಯಲ್ಲಿ ಸರಕಾರದ ಇತಿಹಾಸ ಏರುಪೇರುಗಳಿಂದ ಕೂಡಿದೆ,ಇದು ಈ ಬಾರಿ ಭಿನ್ನವಾಗಲಿದೆ ಎಂದು ತನಗನ್ನಿಸುತ್ತಿಲ್ಲ. ಈ ಬಾರಿಯ ಮುಂಗಡಪತ್ರವು ಖರ್ಚು ಮತ್ತು ಆದಾಯದ ವಿಷಯಗಳಲ್ಲಿ ಹೆಚ್ಚು ಪಾರದರ್ಶಕವಾಗಿದ್ದು,ಪ್ರಶಂಸನೀಯವಾಗಿದೆ. ಇತ್ತೀಚಿನ ಮುಂಗಡಪತ್ರಗಳಲ್ಲಿ ಇಂತಹ ಪಾರದರ್ಶಕತೆಯನ್ನು ಕಂಡಿರಲಿಲ್ಲ ಎಂದು ನುಡಿದರು.