ಕಾಂಗ್ರೆಸ್ ನಾಯಕ ಚೌರಾಸಿಯಾ ಹತ್ಯೆ ಪ್ರಕರಣ: ಆರೋಪಿಯನ್ನು ಬಂಧಿಸದ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ
ಹೊಸದಿಲ್ಲಿ, ಮಾ. 14: ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ದೇವೇಂದ್ರ ಚೌರಾಸಿಯಾ ಅವರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಗೋವಿಂದ್ ಸಿಂಗ್‌ನನ್ನು ಬಂಧಿಸುವಲ್ಲಿ ವಿಫಲವಾಗಿರುವ ಮಧ್ಯಪ್ರದೇಶ ಸರಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಗೋವಿಂದ್ ಸಿಂಗ್ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಶಾಸಕಿ ರಂಬಾನಿ ಪ್ರಜಾಪತಿ ಅವರ ಪತಿ. ‘‘ಕಾನೂನಿನ ನಿಯಮವನ್ನು ಸಂರಕ್ಷಿಸಬೇಕು’’ ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿಗಳಾದ ಧನಂಜಯ ವೈ. ಚಂದ್ರಚೂಡ ಹಾಗೂ ಎಂ.ಆರ್. ಶಾ ಅವರನ್ನೊಳಗೊಂಡ ನ್ಯಾಯಪೀಠ, 2019ರ ಮಾರ್ಚ್‌ನಲ್ಲಿ ಗೋವಿಂದ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಗೋವಿಂದ್ ಸಿಂಗ್ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ರಾಜ್ಯ ಸರಕಾರಕ್ಕೆ ಛೀಮಾರಿ ಹಾಕಿತು. ಸುಮಾರು ಎರಡು ತಿಂಗಳ ಹಿಂದೆಯೇ ಆತನ ವಿರುದ್ಧ ಬಂಧನ ಆದೇಶ ಹೊರಡಿಸಲಾಗಿತ್ತು.
ದೇವೇಂದ್ರ ಚೌರಾಸಿಯಾ ಅವರ ಪುತ್ರ ಸೋಮೇಶ್ ಚೌರಾಸಿಯಾ ಅವರ ಮನವಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತ್ತು. ಕಾಂಗ್ರೆಸ್ ನಾಯಕನ ಹತ್ಯೆ ಪ್ರಕರಣದ ತನಿಖೆಯನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸುವಂತೆ 2019 ಜುಲೈಯಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಸಂಬಂಧಿಸಿದ ಪ್ರಾಧಿಕಾರಕ್ಕೆ ಸೂಚಿಸಿತ್ತು. ಗೋವಿಂದ್ ಸಿಂಗ್ ತಪ್ಪೆಸಗಿದ್ದರೆ, ಆತನನ್ನು ಕೂಡಲೇ ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿತ್ತು. ಈ ನಡುವೆ ಪ್ರಕರಣದ ದೂರುದಾರ ಹಾಗೂ ಸಾಕ್ಷಿಗಳಿಗೆ ಸಿಂಗ್ ಬೆದರಿಕೆ ಹಾಕುವಂತಿಲ್ಲ ಅಥವಾ ಅವರ ಮೇಲೆ ಪ್ರಭಾವ ಬೀರಲು ಯತ್ನಿಸುವಂತಿಲ್ಲ ಎಂದು ನ್ಯಾಯಪೀಠ ಪ್ರತಿಪಾದಿಸಿತ್ತು.
ಆದೇಶ ಮಂಜೂರು ಮಾಡಿ 2 ವರ್ಷಗಳು ಕಳೆದರೂ ಗೋವಿಂದ್ ಸಿಂಗ್ ನನ್ನು ಒಮ್ಮೆ ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಅವರ ವಿರುದ್ಧ ಈ ವರ್ಷ ಫೆಬ್ರವರಿಯಲ್ಲಿ ಬಂಧನಾದೇಶ ಹೊರಡಿಸಿದ ಬಳಿಕ ತನಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ದಾಮೋಹ್ ಜಿಲ್ಲೆಯ ವಿಚಾರಣಾ ನ್ಯಾಯಾಲಯದ ನ್ಯಾಯಮೂರ್ತಿ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಜಿಲ್ಲಾ ನ್ಯಾಯಮೂರ್ತಿಗೆ ದೂರು ನೀಡಿದ್ದಾರೆ.