ತಮಿಳುನಾಡು: ಡಿಎಂಕೆ ಶಾಸಕ ಬಿಜೆಪಿಗೆ ಸೇರ್ಪಡೆ
ಚೆನ್ನೈ,ಮಾ.14: ಪಕ್ಷದ ಜಿಲ್ಲಾಮಟ್ಟದ ಪದಾಧಿಕಾರಿಗಳ ‘ಪ್ರಾಬಲ್ಯ’ ಮತ್ತು ‘ಸದ್ದಿಲ್ಲದ ಚಿತ್ರಹಿಂಸೆ’ಯನ್ನು ವಿರೋಧಿಸಿ ತಮಿಳುನಾಡಿನ ತಿರುಪ್ಪನ್‌ಕುಂಡ್ರಂ ಕ್ಷೇತ್ರದ ಡಿಎಂಕೆ ಶಾಸಕ ಪಿ.ಶರವಣನ್ ಅವರು ರವಿವಾರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಶರವಣನ್ ಬಿಜೆಪಿಗೆ ಸೇರ್ಪಡೆಗೊಂಡ ಡಿಎಂಕೆಯ ಎರಡನೇ ಶಾಸಕರಾಗಿದ್ದು,ಇದಕ್ಕೂ ಮುನ್ನ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದ ಶಾಸಕ ಕೆ.ಕೆ.ಸೆಲ್ವಂ ಅವರು ಕೇಸರಿ ಪಕ್ಷವನ್ನು ಸೇರಿದ್ದರು.
ಪಕ್ಷದ ಆಂತರಿಕ ಸಮಸ್ಯೆಗಳನ್ನು ಎರಡನೇ ಸ್ತರದ ನಾಯಕತ್ವದ ಬಳಿ ಪ್ರಸ್ತಾಪಿಸಲಾಗಿತ್ತಾದರೂ ಯಾವುದೇ ಉಪಯೋಗವಾಗಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿಗಳು ಡಿಎಂಕೆಯಲ್ಲಿ ಹಿಡಿತವನ್ನು ಹೊಂದಿದ್ದಾರೆ ಮತ್ತು ಇದರಿಂದ ಹಲವರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕೆಲವರು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರಾದರೂ ರಾಜಕೀಯವನ್ನು ಜನರಿಗೆ ಸೇವೆಯ ವಿಸ್ತರಿತ ಭಾಗವೆಂದಷ್ಟೇ ಪರಿಗಣಿಸಿರುವ ತನ್ನಿಂದ ಅದು ಸಾಧ್ಯವಿಲ್ಲ ಎಂದು 2019ರ ಉಪಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಶರವಣನ್ ಹೇಳಿದರು.
ವೈದ್ಯರಾಗಿರುವ ಶರವಣನ್ ಮದುರೈನಲ್ಲಿ ಆಸ್ಪತ್ರೆಯೊಂದನ್ನು ಹೊಂದಿದ್ದಾರೆ. ವರ್ಷಗಳ ಹಿಂದೆ ಬಿಜೆಪಿಯಲ್ಲಿದ್ದ ಅವರು ಬಳಿಕ ಡಿಎಂಕೆಗೆ ಸೇರಿದ್ದರು.