×
Ad

ಸಾಮಾಜಿಕ ಮಾಧ್ಯಮಗಳ ನೌಕರರಿಗೆಂದೂ ಜೈಲು ಶಿಕ್ಷೆಯ ಬೆದರಿಕೆಯೊಡ್ಡಿಲ್ಲ: ಕೇಂದ್ರ

Update: 2021-03-14 21:35 IST

ಹೊಸದಿಲ್ಲಿ,ಮಾ.14: ಟ್ವಿಟರ್‌ನಂತಹ ಯಾವುದೇ ಸಾಮಾಜಿಕ ಮಾಧ್ಯಮದ ಉದ್ಯೋಗಿಗಳಿಗೆ ಸರಕಾರವೆಂದೂ ಜೈಲುಶಿಕ್ಷೆಯ ಬೆದರಿಕೆಯನ್ನೊಡ್ಡಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿಳಿಸಿದೆ.

ಫೇಸ್‌ಬುಕ್,ವಾಟ್ಸ್‌ಆ್ಯಪ್ ಮತ್ತು ಟ್ವಿಟರ್ ಸಿಬ್ಬಂದಿಗಳಿಗೆ ಜೈಲುಶಿಕ್ಷೆಯ ಬೆದರಿಕೆಯೊಡ್ಡಲಾಗುತ್ತಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸಚಿವಾಲಯವು,ದೇಶದಲ್ಲಿಯ ಎಲ್ಲ ಇತರ ಉದ್ಯಮಗಳಂತೆ ಸಾಮಾಜಿಕ ಮಾಧ್ಯಮಗಳೂ ಭಾರತದ ಕಾನೂನುಗಳು ಮತ್ತು ಸಂವಿಧಾನವನ್ನು ಅನುಸರಿಸಲು ಬದ್ಧವಾಗಿವೆ. ಸಂಸತ್ತಿನಲ್ಲಿ ಈಗಾಗಲೇ ಸ್ಪಷ್ಟಪಡಿಸಿರುವಂತೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಸರಕಾರ,ಪ್ರಧಾನಿ ಅಥವಾ ಸಚಿವರನ್ನು ಟೀಕಿಸಬಹುದು,ಆದರೆ ಹಿಂಸಾಚಾರಕ್ಕೆ ಉತ್ತೇಜನ,ಕೋಮು ವಿಭಜನೆ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು ನೀಡಿದರೆ ಸರಕಾರವು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದೆ.

 ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಇತ್ತೀಚಿಗೆ ಹೊರಡಿಸಲಾಗಿರುವ ಮಾರ್ಗಸೂಚಿಗಳು ಅವು ಬಳಕೆದಾರರಿಗಾಗಿ ಪರಿಣಾಮಕಾರಿ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸುವುದನ್ನು ಅಗತ್ಯವಾಗಿಸಿವೆ ಅಷ್ಟೇ ಎಂದಿರುವ ಸಚಿವಾಲಯವು, ಸರಕಾರವೆಂದೂ ಲಿಖಿತವಾಗಿ ಅಥವಾ ಮೌಖಿಕವಾಗಿ ಯಾವುದೇ ಸಾಮಾಜಿಕ ಮಾಧ್ಯಮದ ಉದ್ಯೋಗಿಗಳಿಗೆ ಜೈಲುಶಿಕ್ಷೆಯ ಬೆದರಿಕೆಯನ್ನೊಡ್ಡಿಲ್ಲ. ಸರಕಾರವು ಟೀಕೆಗಳನ್ನು ಮತ್ತು ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುತ್ತದೆ. ಆದರೆ ಇತ್ತೀಚಿಗೆ ಭಾರತದ ಹೊರಗಿನ ಭಯೋತ್ಪಾದಕ ಗುಂಪುಗಳು ದ್ವೇಷ,ಅಸಾಮರಸ್ಯ ಮತ್ತು ಹಿಂಸೆಯನ್ನು ಪ್ರಚೋದಿಸಲು ಹಾಗೂ ಬಳಕೆದಾರರ ಸುರಕ್ಷತೆಗೆ ಬೆದರಿಕೆಯನ್ನೊಡ್ಡಲು ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗಿಸಿಕೊಳ್ಳುವ ನಿದರ್ಶನಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News