×
Ad

ನಕಲಿ ಕ್ರಿಮಿನಲ್ ದೂರಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಬಿಜೆಪಿ ನಾಯಕನಿಂದ ಸುಪ್ರೀಂಗೆ ಪಿಐಎಲ್ ಸಲ್ಲಿಕೆ

Update: 2021-03-14 22:15 IST

ಹೊಸದಿಲ್ಲಿ, ಮಾ. 14: ನಕಲಿ ಕ್ರಿಮಿನಲ್ ದೂರಿನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಾಗೂ ಇಂತಹ ತಪ್ಪು ವಿಚಾರಣೆಗೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಲು ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ಅತ್ಯಾಚಾರ ಆರೋಪಿ ವಿಷ್ಣು ತಿವಾರಿ ಅಮಾಯಕ, ಭೂವಿವಾದಕ್ಕೆ ಸಂಬಂಧಿಸಿ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯ ಜನವರಿ 28ರಂದು ತೀರ್ಪು ನೀಡಿದ ಅತಿ ಸೂಕ್ಷ್ಮ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿದ ಬಳಿಕ 2000 ಸೆಪ್ಟಂಬರ್ 16ರಂದು ತಿವಾರಿಯನ್ನು ಬಂಧಿಸಲಾಗಿತ್ತು.

ಅನಂತರ ಅವರು 20 ವರ್ಷ ಜೈಲಿನಲ್ಲಿ ಇದ್ದರು. ನ್ಯಾಯವಾದಿ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ‘‘ನಕಲಿ ಪ್ರಕರಣದಲ್ಲಿ ತಿವಾರಿ ಅವರನ್ನು ತಪ್ಪಾಗಿ ಅಪರಾಧಿ ಎಂದು ಪರಿಗಣಿಸಿರುವುದಕ್ಕೆ ಹಾಗೂ ಜೀವಾವಧಿ ಶಿಕ್ಷೆ ನೀಡಿರುವುದಕ್ಕೆ ಸಾಕಷ್ಟು ಪರಿಹಾರ ನೀಡಬೇಕು’’ ಎಂದು ಅವರು ಪ್ರತಿಪಾದಿಸಿದ್ದಾರೆ. ವಿಶೇಷ ಕಾಯ್ದೆ ಅಡಿಯಲ್ಲಿ ವಿಚಾರಣಾಧೀನ ಕೈದಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕಾರ್ಯವಿಧಾನ ಹಾಗೂ ತಮ್ಮ ಪ್ರಕರಣಗಳು ಸಮಯಕ್ಕೆ ಅನುಗುಣವಾಗಿ ನಿರ್ಧಾರಿಸಲು ವಿಚಾರಣಾಧೀನ ಕೈದಿಗಳಿಗೆ ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶಿಸುವಂತೆ ಕೂಡ ಮನವಿಯಲ್ಲಿ ಕೋರಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಾನೂನನ್ನು ದುರ್ಬಳಕೆ ಮಾಡಲಾಗುತ್ತಿದೆ.

ನಕಲಿ ಹಾಗೂ ದುರುದ್ದೇಶಪೂರಿತ ದೂರು ದಾಖಲಿಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಪರಿಣಾಮಕಾರಿ ಕಾನೂನು ಇದ್ದರೂ ಅಪರಾಧಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಿಶ್ರಾ ಅವರು ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಹೇಳಿದ್ದಾರೆ. ‘‘ನಕಲಿ ಪ್ರಕರಣದಿಂದ ಪೊಲೀಸ್ ಹಾಗೂ ವಿಚಾರಣೆಯ ದುರ್ನಡತೆಗೆ ಬಲಿಪಶುವಾಗುವ ಅಮಾಯಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪರಿಣಾಮಕಾರಿಯಲ್ಲದ ಆಡಳಿತಾಂಗದ ಕಾರಣದಿಂದ ವಿಚಾರಣೆ ವಿಳಂಬವಾಗುವುದಿಂದ ಅವರು ಭರವಸೆ ಕಳೆದುಕೊಳ್ಳುತ್ತಿದ್ದಾರೆ ಹಾಗೂ ಅವರ ಕುಟುಂಬ ನಾಶವಾಗುತ್ತಿದೆ’’ ಎಂದು ಮನವಿಯಲ್ಲಿ ಹೇಳಲಾಗಿದೆ. ಈ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಗೃಹ, ಕಾನೂನು ಹಾಗೂ ನ್ಯಾಯದ ಕೇಂದ್ರ ಸಚಿವಾಲಯ, ಕಾನೂನು ಆಯೋಗ ಹಾಗೂ ಉತ್ತರಪ್ರದೇಶವನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News