ಜಮ್ಮುಕಾಶ್ಮೀರದ 12ನೇ ತರಗತಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಶೇ. 100 ಅಂಕ

Update: 2021-03-14 18:28 GMT

ಶ್ರೀನಗರ, ಮಾ. 14: ಜಮ್ಮು ಹಾಗೂ ಕಾಶ್ಮೀರದ 12ನೇ ತರಗತಿ ಪರೀಕ್ಷೆಗಳಲ್ಲಿ ಬಾಲಕರಿಗಿಂತ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಈ ವಾರದ ಆರಂಭದಲ್ಲಿ ಪ್ರಕಟವಾದ ಪರೀಕ್ಷೆಯ ಫಲಿತಾಂಶ ಅವರು ಈ ಬಾರಿ ಇನ್ನಷ್ಟು ಸಾಧನೆ ಮಾಡಿರುವುದನ್ನು ತೋರಿಸಿದೆ.

ವಿಜ್ಞಾನ ಹಾಗೂ ಕಲೆ ಹಾಗೂ ಗೃಹ ವಿಜ್ಞಾನದಲ್ಲಿ ಮೂವರು ಬಾಲಕಿಯರು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ವರ್ಷ ಶಾಲೆಗಳನ್ನು ಮುಚ್ಚಲಾಗಿತ್ತು ಹಾಗೂ ತರಗತಿಯನ್ನು ಆನ್‌ಲೈನ್‌ಗೆ ಪರಿವರ್ತಿಸಲಾಗಿತ್ತು. ಇದರಿಂದ ದೇಶಾದ್ಯಂತದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸವಾಲನ್ನು ಎದುರಿಸಬೇಕಾಗಿತ್ತು. ಇಸ್ರತ್ ಮುಝಫರ್ (ವಿಜ್ಞಾನ), ಖುಷ್ಬೂ ನಝೀರ್ (ಕಲೆ) ಹಾಗೂ ಸಬೀರಾ ರಶೀದ್ (ಗೃಹ ವಿಜ್ಞಾನ) ಅವರು ಪರೀಕ್ಷೆಯ ಸಂದರ್ಭ ಇಂಟರ್‌ನೆಟ್ ನಿರ್ಬಂಧದಂತಹ ಹಲವು ಸವಾಲುಗಳ ನಡುವೆಯೂ ಈ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದ ಇಶ್ರತ್ ಮುಝಪ್ಫರ್ ವೈದ್ಯರಾಗಲು ಬಯಸಿದ್ದಾರೆ.

‘‘ಉತ್ತಮ ಅಂಕಗಳನ್ನು ತೆಗೆಯುತ್ತೇನೆ ಎಂದು ನನಗೆ ಖಾತರಿ ಇತ್ತು. ಆದರೆ, ಪೂರ್ಣ ಅಂಕ ಬಂದಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಅಚ್ಚರಿ ಉಂಟು ಮಾಡಿದೆ. ಈ ಸಾಧನೆಗೆ ದೇವರಿಗೆ ವಂದನೆ ಹೇಳಬೇಕು. ಭವಿಷ್ಯದಲ್ಲಿ ಕೂಡ ಇದೇ ರೀತಿಯ ಯಶಸ್ಸು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ. ಖುಷ್ಬೂ ನಝೀರ್ ಹೆತ್ತವರು ರೈತರು. ಅವರ ಕುಟುಂಬದಲ್ಲಿ 12ನೇ ತರಗತಿ ಪೂರೈಸಿದ ಮೊದಲ ವಿದ್ಯಾರ್ಥಿನಿ ಖಷ್ಬೂ ನಝೀರ್. ಉಳಿದವರಿಗೆ 10ನೇ ತರಗತಿ ಉತ್ತೀರ್ಣರಾಗಲು ಕೂಡ ಸಾಧ್ಯವಾಗಿರಲಿಲ್ಲ. ಕಾಶ್ಮೀರ ಆಡಳಿತ ಸೇವೆಗೆ ಸೇರಲು ಬಯಸುವುದಾಗಿ ಅವರು ಹೇಳಿದ್ದಾರೆ.

‘‘ನಾನು ಕಲಾ ವಿಭಾಗದ ವಿದ್ಯಾರ್ಥಿನಿ. ರಾಜ್ಯಶಾಸ್ತ್ರಲ್ಲಿ ಪದವಿ ಪಡೆಯಲು ಬಯಸುತ್ತೇನೆ. ನನ್ನ ಕನಸು ಐಎಎಸ್ ಅಧಿಕಾರಿಯಾಗುವುದು’’ ಎಂದು ಖುಷ್ಬೂ ಹೇಳಿದ್ದಾರೆ. ಸಬೀರಾ ರಶೀದ್ ಪ್ರತಿಕ್ರಿಯಿಸಿ, ‘‘ಗೃಹ ವಿಜ್ಞಾನಕ್ಕೆ ಸಾಕಷ್ಟು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಜನರು ಯಾವಾಗಲೂ ನನ್ನನ್ನು ನಿರುತ್ಸಾಹಗೊಳಿಸುತ್ತಿದ್ದರು. ಅದು ಅವರ ತಪ್ಪಲ್ಲ ಎಂಬುದು ನನ್ನ ಭಾವನೆ. ಅವರಿಗೆ ಈ ವಿಷಯದ ಪ್ರಾಮುಖ್ಯತೆ ಬಗ್ಗೆ ತಿಳಿದಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಈ ವಿಷಯದ ಕುರಿತು ಸಂಪೂರ್ಣ ಅನ್ವೇಷಿಸಿಲ್ಲ. ನಿರುತ್ಸಾಹಗೊಳ್ಳುವುದಿಲ್ಲ ಎಂದು ನಾನು ನಿರ್ಧರಿಸಿದ್ದೇನೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News