ಗೂಢಚರ್ಯೆ ನಡೆಸಿ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡಿದ ಯೋಧ ಆಕಾಶ್ ಮಹಾರಿಯಾ ಬಂಧನ
Update: 2021-03-15 11:47 IST
ಜೈಪುರ್: ಗೂಢಚರ್ಯೆ ನಡೆಸಿ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ನೀಡಿದ ಆರೋಪದ ಮೇಲೆ ಭಾರತೀಯ ಸೇನೆಯ ಸೈನಿಕ ಆಕಾಶ್ ಮಹಾರಿಯಾ ಎಂಬಾತನನ್ನು ರಾಜಸ್ಥಾನ ಪೊಲೀಸರ ಗುಪ್ತಚರ ಘಟಕ ಬಂಧಿಸಿದೆ. ಫೇಸ್ ಬುಕ್‍ನಲ್ಲಿ ತನಗೆ ಪರಿಚಯವಾದ ಪಾಕಿಸ್ತಾನದ ಕೆಲ ಮಹಿಳಾ ಏಜಂಟರ ಮುಖಾಂತರ ಆತ ಈ ಸೂಕ್ಷ್ಮ ಮಾಹಿತಿ ರವಾನಿಸಿದ್ದಾನೆನ್ನಲಾಗಿದೆ.
ಇಪ್ಪತ್ತೆರಡು ವರ್ಷದ ಮಹಾರಿಯಾ ರಾಜಸ್ಥಾನದ ಸಿಕರ್ ಜಿಲ್ಲೆಯವನಾಗಿದ್ದು ಸಿಕ್ಕಿಂನಲ್ಲಿ ಪೋಸ್ಟಿಂಗ್ ಪಡೆದಿದ್ದ. ಆರೋಪಿ ತನ್ನ ಕುಟುಂಬವನ್ನು ಭೇಟಿಯಾಗಲು ತವರು ರಾಜ್ಯಕ್ಕೆ ಆಗಮಿಸಿದ್ದ ವೇಳೆ ರಾಜಸ್ಥಾನ ಪೊಲೀಸರು ಆತನಿಗೆ ಸಮನ್ಸ್ ಕಳುಹಿಸಿದ್ದರು. ಆತನನ್ನು ಗುಪ್ತಚರ ಏಜನ್ಸಿಗಳು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ.
ಆರೋಪಿಯು ಪಾಕಿಸ್ತಾನಿ ಮಹಿಳಾ ಏಜಂಟರ ಜತೆಗೆ ಅಶ್ಲೀಲ ಚ್ಯಾಟಿಂಗ್ ಕೂಡ ನಡೆಸಿದ್ದಾನೆಂದು ಆರೋಪಿಸಲಾಗಿದೆ. ಆತ ಭಾರತೀಯ ಸೇನೆಯನ್ನು ಸೆಪ್ಟೆಂಬರ್ 2018ರಲ್ಲಿ ಸೇರಿ ಒಂದು ವರ್ಷ ತರಬೇತಿ ಕೂಡ ಪೂರ್ಣಗೊಳಿಸಿದ್ದ ಎಂದು ತಿಳಿದು ಬಂದಿದೆ.