"ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದ ಸಚಿನ್ ವಾಝೆ ಬಿಜೆಪಿ, ಕೇಂದ್ರದ ಹಿಟ್ ಲಿಸ್ಟ್ ನಲ್ಲಿದ್ದರು"
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ನಿವಾಸ ಸಮೀಪ ಸ್ಫೋಟಕಗಳು ತುಂಬಿದ್ದ ಕಾರು ಪತ್ತೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಏಜನ್ಸಿ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಬಂಧಿಸಿರುವ ಕ್ರಮ ಮಹಾರಾಷ್ಟ್ರ ಪೊಲೀಸರಿಗೆ 'ಅವಮಾನ'ವಾಗಿದೆ ಎಂದು ಶಿವಸೇನೆ ಹೇಳಿದೆಯಲ್ಲದೆ ವಾಝೆ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದೆ. "ಅನ್ವಯ್ ನಾಯ್ಕ್ ಆತ್ಮಹತ್ಯೆ ಪ್ರಕರಣದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ್ದು ವಾಝೆ ಆಗಿದ್ದರಿಂದ ಅವರು ಬಿಜೆಪಿ ಹಾಗೂ ಕೇಂದ್ರದ ಹಿಟ್ ಲಿಸ್ಟ್ ನಲ್ಲಿದ್ದರು" ಎಂದು ಶಿವಸೇನೆ ಹೇಳಿದೆ.
ಈ ಕುರಿತು ಶಿವಸೇನೆ ತನ್ನ ಸಾಮ್ನಾ ಮುಖವಾಣಿಯಲ್ಲಿ ಬರೆದಿದೆ. ಮಹಾರಾಷ್ಟ್ರ ಪೊಲೀಸರ ಧೈರ್ಯ ಮತ್ತು ಸಾಮರ್ಥ್ಯ ಜಗತ್ತಿನಾದ್ಯಂತ ಎಲ್ಲರಿಗೂ ತಿಳಿದ ವಿಚಾರವಾಗಿರುವಾಗ ಈ ಪ್ರಕರಣದಲ್ಲಿ ಎನ್‍ಐಎ ತನಿಖೆ ಅಚ್ಚರಿ ಮೂಡಿಸಿದೆ ಎಂದು ಶಿವಸೇನೆ ಹೇಳಿದೆ.
"ಸಚಿನ್ ವಾಝೆ ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದರೆ ಮುಂಬೈ ಪೊಲೀಸರು ಹಾಗೂ ಮಹಾರಾಷ್ಟ್ರ ಎಟಿಎಸ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಮರ್ಥವಿದೆ" ಎಂದು ಶಿವಸೇನೆ ಹೇಳಿದೆ.
"ಆದರೆ ಎನ್‍ಐಎಗೆ ಅದು ಬೇಕಿಲ್ಲ: ಎಂದು ಹೇಳಿರುವ ಶಿವಸೇನೆ ಸತ್ಯ ಶೀಘ್ರದಲ್ಲಿ ಹೊರಬರುವುದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದೆ.