ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು: ಶಿವಸೇನೆ

Update: 2021-03-16 18:35 GMT

ಮುಂಬೈ, ಮಾ. 16: ಬೆಳಗಾವಿಯಲ್ಲಿ ಮರಾಠಿ ಮಾತನಾಡುವ ಜನರ ಮೇಲೆ ಕನ್ನಡ ಪರ ಸಂಘಟನೆಗಳಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಮಂಗಳವಾರ ಆರೋಪಿಸಿರುವ ಶಿವಸೇನೆ, ಬೆಳಗಾಂವ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎಂದಿದೆ.

ಇತ್ತೀಚೆಗೆ ಬೆಳಗಾಂವ್‌ನಲ್ಲಿ ಕನ್ನಡ ಪರ ಸಂಘಟನೆಯೊಂದು ಮರಾಠರನ್ನು ಥಳಿಸಿತ್ತು. ಅಂಗಡಿಗಳ ಮರಾಠಿ ಬೋರ್ಡ್‌ಗಳನ್ನು ತೆಗೆದು ಹಾಕಿತ್ತು. ಮರಾಠಿ ಪರ ಸಾಮಾಜಿಕ ಮಾಧ್ಯಮದ ಬಳಕೆದಾರರರನ್ನು ಗುರಿಯಾಗಿರಿಸಿತ್ತು ಎಂದು ಶಿವಸೇನೆಯ ಮುಖವಾಣಿಯಾಗಿರುವ ‘ಸಾಮ್ನಾ’ದ ಸಂಪಾದಕೀಯ ಹೇಳಿದೆ.

ಕರ್ನಾಟಕದ ಪೊಲೀಸರು ಕೂಡ ಮರಾಠಿ ಜನರಿಗೆ ಕಿರುಕುಳ ನೀಡಿದ್ದಾರೆ ಎಂದು ಅದು ಪ್ರತಿಪಾದಿಸಿದೆ.

  ‘‘ಒಂದು ವೇಳೆ ಈ ದೌರ್ಜನ್ಯಗಳು ನಿಲ್ಲದೇ ಇದ್ದರೆ, ಬೆಳಗಾಂವ್ ಅನ್ನು ಕೇಂದ್ರಾಡಳಿತ ಪ್ರದೇಶವೆಂದು ಕೇಂದ್ರ ಸರಕಾರ ಘೋಷಿಸಬೇಕು’’ ಎಂದು ಅದು ಆಗ್ರಹಿಸಿದೆ. ಈ ವಿಷಯವನ್ನು ಕೇಂದ್ರ ಸರಕಾರ ಹಾಗೂ ಕರ್ನಾಟಕ ಮುಖ್ಯಮಂತ್ರಿಯ ಗಮನಕ್ಕೆ ತರುವಂತೆ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಪಢ್ನವೀಸ್ ಅವರಲ್ಲಿ ‘ಸಾಮ್ನಾ’ ಸಂಪಾದಕೀಯ ಮನವಿ ಮಾಡಿದೆ.

ಇಂಧೋರ್ (ಮಧ್ಯಪ್ರದೇಶ) ಹಾಗೂ ವಡೋದರಾ (ಗುಜರಾತ್)ದಲ್ಲಿ ಮರಾಠಿ ಜನರು ಇದ್ದಾರೆ. ಆದರೆ, ಅವರು ಅಲ್ಲಿನ ಜನರೊಂದಿಗೆ ಯಾವುದೇ ರೀತಿಯ ಸಂಘರ್ಷಕ್ಕೆ ಇಳಿದಿಲ್ಲ ಎಂದು ಸಂಪಾದಕೀಯ ಹೇಳಿದೆ.

ಮಹಾರಾಷ್ಟ್ರದಲ್ಲಿ ಕೂಡ ಹಲವು ವರ್ಷಗಳಿಂದ ವಿವಿಧ ಭಾಷೆಗಳನ್ನು ಮಾತನಾಡುವ ಜನರು ವಾಸಿಸುತ್ತಿದ್ದಾರೆ. ಅವರನ್ನು ಮರಾಠಿ ಜನರು ಕೆಟ್ಟದಾಗಿ ನಡೆಸಿಕೊಂಡಿಲ್ಲ ಎಂದು ಅದು ಹೇಳಿದೆ.

‘‘ಸ್ಥಳೀಯ ಜನರು ಮರಾಠಿ ಸಮುದಾಯದ ಮೇಲೆ ನಡೆಸುತ್ತಿರುವ ದೌರ್ಜನ್ಯ ಪ್ರಕರಣವನ್ನು ಕರ್ನಾಟಕದ ಬಿಜೆಪಿ ಸರಕಾರ ನಿರ್ವಹಿಸುತ್ತಿರುವ ರೀತಿ ದುಷ್ಕರ್ಮಿಗಳಿಗೆ ಉತ್ತೇಜನ ನೀಡಿದಂತೆ ಕಾರಣುತ್ತದೆ’’ ಎಂದು ಶಿವಸೇನೆ ಆರೋಪಿಸಿದೆ.

ಗಡಿ ವಿವಾದ ಸುಪ್ರೀಂ ಕೋರ್ಟ್‌ನ ಮುಂದೆ ವಿಚಾರಣೆಗೆ ಬಾಕಿ ಇರುವ ಸಂದರ್ಭ ಮರಾಠಿ ಮಾತನಾಡುವ ಜನರನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಕಾನೂನು ಬಾಹಿರ ಎಂದು ಸಂಪಾದಕೀಯ ಹೇಳಿದೆ.

ಮಹಾರಾಷ್ಟ್ರದ ಗಡಿಯ ಕರ್ನಾಟಕದಲ್ಲಿರುವ ಮರಾಠಿ ಮಾತನಾಡುವ ಜನರ ಪ್ರಾಬಲ್ಯದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಸರಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿತು.

ಈ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಕಾಲಕಾಲಕ್ಕೆ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಬೇಡಿಕೆಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News