ಪಶ್ಚಿಮ ಬಂಗಾಳದಲ್ಲಿ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಹೆಸರಿಸಿ: ಬಿಜೆಪಿಗೆ ಸವಾಲೆಸೆದ ಟಿಎಂಸಿ
ಕೋಲ್ಕತಾ: ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ಪಶ್ಚಿಮಬಂಗಾಳದ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ತೃಣ ಮೂಲ ಕಾಂಗ್ರೆಸ್ ಪ್ರತಿಯೊಂದು ಆರೋಪಕ್ಕೂ ಖಂಡನೆ ವ್ಯಕ್ತಪಡಿಸಿದೆ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿ ಎಂದು ಸುಲಭ ಸವಾಲನ್ನು ಎಸೆದಿದೆ.
ನಾನು ಪ್ರಧಾನಮಂತ್ರಿ ಬಳಿ ಒಂದೇ ಪ್ರಶ್ನೆ ಕೇಳಲು ಬಯಸುತ್ತೇನೆ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ನಮ್ಮಲ್ಲಿ ಮಮತಾ ಬ್ಯಾನರ್ಜಿ ಅವರಿದ್ದಾರೆ. ನೀವು ಯಾಕೆ ಒಂದೂ ಹೆಸರನ್ನು ಹೇಳುತ್ತಿಲ್ಲ? ಏಕೆ ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ, ನೀವು ‘ಎ’ ಎಂದು ಹೆಸರಿಸಿದರೆ, ‘ಬಿ’ ಹಾಗೂ ‘ಸಿ’ ಬಂಡಾಯ ಏಳುತ್ತವೆ. ನಾನು ನಿಮಗೆ ಸವಾಲು ಹಾಕುತ್ತೇನೆ.ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸಿ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್ ರಿಂದ ಆರಂಭಿಸಿ ಇತ್ತೀಚೆಗೆ ಪಕ್ಷವನ್ನು ಸೇರಿರುವ ಚಿತ್ರನಟ ಮಿಥುನ್ ಚಕ್ರವರ್ತಿಯ ತನಕ, ತೃಣಮೂಲ ಕಾಂಗ್ರೆಸ್ ನಿಂದ ಪಕ್ಷಾಂತರವಾಗಿರುವ ಪ್ರಮುಖರಲ್ಲಿ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಊಹಾಪೋಹ ಕೇಳಿಬಂದಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭರವಸೆ ನೀಡಿರುವುದನ್ನು ಈಡೇರಿಸಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು(ಅಮಿತ್ ಶಾ) ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದಿರುವ ಒಬ್ರಿಯಾನ್, ಪುರುಲಿಯಾ ಜಿಲ್ಲೆಯಲ್ಲಿ ಪ್ರಧಾನಿ ಇಂದು ಮಾಡಿರುವ ಆರೋಪಕ್ಕೆ ಉತ್ತರವಾಗಿ 10 ಅಂಶಗಳ ಫ್ಯಾಕ್ಟ್ ಚೆಕ್ ನ್ನು ಟ್ವೀಟ್ ಮಾಡಿದ್ದಾರೆ.
ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಪುರುಲಿಯಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ, ಈ ಪ್ರದೇಶ ಅಭಿವೃದ್ದಿಯಲ್ಲಿ ಹಿಂದುಳಿದಿದೆ. ತೃಣಮೂಲ ಕಾಂಗ್ರೆಸ್ ಗೃಹ ಅಭಿವೃದ್ದಿ ಕಾರ್ಯಕ್ಕ ತಡೆಯಾಗುತ್ತಿದೆ ಎಂದಿದ್ದರು.