ಮಾಜಿ ಸಿಜೆಐ ಗೊಗೊಯಿ ವಿರುದ್ಧ ‘ಸಂಚಿನ’ ತನಿಖಾ ವರದಿ ಬಹಿರಂಗಕ್ಕೆ ಸುಪ್ರೀಂ ನಕಾರ

Update: 2021-03-18 14:17 GMT

 ಹೊಸದಿಲ್ಲಿ,ಮಾ.18: ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ವಿರುದ್ಧದ ಲೈಂಗಿಕ ಕಿರುಕುಳಗಳ ಆರೋಪಗಳ ಹಿಂದಿನ ವ್ಯಾಪಕ ಸಂಚಿನ ಕುರಿತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎ.ಕೆ.ಪಟ್ನಾಯಕ್ ಅವರು ಸಲ್ಲಿಸಿರುವ ವರದಿಯ ವಿವರಗಳನ್ನು ಬಹಿರಂಗಗೊಳಿಸಲು ಸುಪ್ರೀಂ ಕೋರ್ಟ್‌ನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ನಿರಾಕರಿಸಿದ್ದಾರೆ.

ವರದಿಯ ವಿವರಗಳನ್ನು ಕೋರಿ ಪತ್ರಕರ್ತ ಸೌರವ್ ದಾಸ್ ಅವರು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ಆರ್‌ಟಿಐ ಕಾಯ್ದೆಯು ಜಾರಿಗೊಂಡ ಬಳಿಕ ಯಾವುದೇ ಸರಕಾರಿ ಪ್ರಾಧಿಕಾರವು ಮಾಹಿತಿಯನ್ನು ನಿರಾಕರಿಸುವಂತಿಲ್ಲ ಎಂದೂ ಅವರು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅರ್ಜಿಯಲ್ಲಿ ಕೋರಲಾಗಿರುವ ಮಾಹಿತಿಗಳು ಮಾಹಿತಿ ಹಕ್ಕು ಕಾಯ್ದೆಯ 8(1)(ಬಿ),8(1)(ಜೆ) ಮತ್ತು 11(1) ಕಲಮ್‌ಗಳಡಿ ಸಾರ್ವಜನಿಕರಿಗೆ ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ಹೊಂದಿವೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ದಾಸ್‌ಗೆ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ.

ದಾಸ್ ನ್ಯಾಯಾಂಗ ಕಲಾಪಗಳ ಭಾಗವಾಗಿರಲಿಲ್ಲ ಎಂದು ಬೆಟ್ಟು ಮಾಡಿರುವ ಅಧಿಕಾರಿ,2013ರ ಸರ್ವೋಚ್ಚ ನ್ಯಾಯಾಲಯ ನಿಯಮಾವಳಿಗಳಡಿ ಅರ್ಜಿಯನ್ನು ಸಲ್ಲಿಸುವ ಮೂಲಕ ಮಾತ್ರ ವಿವರಗಳನ್ನು ಕೋರಬಹುದು ಎಂದು ತಿಳಿಸಿದ್ದಾರೆ.

ಫೆ.18ರಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್,ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರ ಪೀಠವು ಸಂಚಿನ ಆರೋಪಗಳನ್ನು ಪರಿಶೀಲಿಸಲು 2019ರಲ್ಲಿ ಸ್ವಯಂಪ್ರೇರಿತವಾಗಿ ಆರಂಭಿಸಲಾಗಿದ್ದ ಪ್ರಕರಣವನ್ನು ಮುಚ್ಚುವಂತೆ ಆದೇಶಿಸಿತ್ತು. ಪಟ್ನಾಯಕ್ ನೇತೃತ್ವದ ವಿಚಾರಣಾ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದೆ ಎಂದು ಹೇಳಿದ್ದ ಪೀಠವು,ಸಿಜೆಐ ಗೊಗೊಯಿ ವಿರುದ್ಧ ಒಂದು ರೀತಿಯ ಸಂಚು ರೂಪಿಸಿದ್ದಿರಬಹುದು ಎಂದು ನಂಬಲು ಬಲವಾದ ಕಾರಣಗಳಿವೆ ಎಂದು ನ್ಯಾ.ಪಟ್ನಾಯಕ್ ವರದಿಯನ್ನು ಉಲ್ಲೇಖಿಸಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News