ಪ್ರಾಧ್ಯಾಪಕ ಪಿ.ಬಿ.ಮೆಹ್ತಾ ವಾಪಸಾತಿಗೆ ಅಶೋಕ ವಿವಿ ವಿದ್ಯಾರ್ಥಿಗಳ ಒತ್ತಾಯ
ಹೊಸದಿಲ್ಲಿ,ಮಾ.18: ಪ್ರೊಫೆಸರ್ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿರುವ ರಾಜಕೀಯ ವಿಶ್ಲೇಷಕ ಹಾಗೂ ವಿವರಣಾಕಾರ ಪಿ.ಬಿ.ಮೆಹ್ತಾ ಅವರನ್ನು ಮರುನೇಮಕಾತಿಗೊಳಿಸಬೇಕು ಎಂದು ಗುರುವಾರ ಆಗ್ರಹಿಸಿರುವ ಹರ್ಯಾಣದ ಅಶೋಕ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ,ರಾಜೀನಾಮೆಗಳ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸುವಂತೆ ವಿವಿ ಆಡಳಿತವನ್ನು ಕೇಳಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದಷ್ಟೇ ವಿವಿಯ ಕುಲಪತಿ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದ ಮೆಹ್ತಾ ಮಂಗಳವಾರ ಪ್ರೊಫೆಸರ್ ಹುದ್ದೆಗೂ ರಾಜೀನಾಮೆ ಸಲ್ಲಿಸಿದ್ದರು. ಮೆಹ್ತಾ ಅವರು ನರೇಂದ್ರ ಮೋದಿ ಸರಕಾರದ ಕಟು ಟೀಕಾಕಾರರಾಗಿದ್ದಾರೆ. ಆದರೆ ಮೆಹ್ತಾರ ಬರವಣಿಗೆಗಳು ಮತ್ತು ಟೀಕೆಗಳಿಗೂ ಅವರ ರಾಜೀನಾಮೆಗೂ ಸಂಬಂಧವಿದೆಯೇ ಎನ್ನುವುದನ್ನು ತಿಳಿಸಲು ವಿವಿ ನಿರಾಕರಿಸಿದೆ. ಮೆಹ್ತಾರ ನಿರ್ಗಮನದ ಬಳಿಕ ಆರ್ಥಿಕ ತಜ್ಞ ಅರವಿಂದ ಸುಬ್ರಮಣಿಯನ್ ಅವರೂ ವಿವಿಯಲ್ಲಿನ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಮೆಹ್ತಾರ ಅನುಮತಿಯನ್ನು ಪಡೆದುಕೊಂಡು ಅವರ ರಾಜೀನಾಮೆ ಪತ್ರವನ್ನು ಬಹಿರಂಗಗೊಳಿಸುವಂತೆಯೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಆಗ್ರಹದ ಹಿನ್ನೆಲೆಯಲ್ಲಿ ವಿವಿಯ ಸಹಸ್ಥಾಪಕರೋರ್ವರು ರಾಜೀನಾಮೆ ವಾಪಸಾತಿಯನ್ನು ಪರಿಶೀಲಿಸುವಂತೆ ಮೆಹ್ತಾ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಮೆಹ್ತಾ ಅವರು ಈ ವಿಷಯದಲ್ಲಿ ಈವರೆಗೆ ಯಾವುದೇ ಬಹಿರಂಗ ಹೇಳಿಕೆಯನ್ನು ನೀಡಿಲ್ಲ.
ಅಶೋಕ ವಿವಿ ವಿದ್ಯಾರ್ಥಿಗಳ ಸಂಘ ಮತ್ತು ಹಳೇವಿದ್ಯಾರ್ಥಿಗಳ ಮಂಡಳಿ ರಾಜೀನಾಮೆ ನೀಡಿರುವ ಪ್ರಾಧ್ಯಾಪಕರನ್ನು ಬೆಂಬಲಿಸಿವೆ. ಕಳೆದ 48 ಗಂಟೆಗಳಲ್ಲಿ ನಡೆದಿರುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ಪಾರದರ್ಶಕತೆಯನ್ನು ಪ್ರದರ್ಶಿಸುವಂತೆ ಜಂಟಿ ಹೇಳಿಕೆಯಲ್ಲಿ ಅವು ಸ್ಥಾಪಕರನ್ನು ಮತ್ತು ಟ್ರಸ್ಟಿಗಳನ್ನು ಆಗ್ರಹಿಸಿವೆ.