ವಾಹನಗಳ ಗುಜರಿ ನೀತಿಯಡಿ ಹೊಸ ಕಾರುಗಳ ಖರೀದಿಗೆ ಶೇ.5ರಷ್ಟು ರಿಯಾಯಿತಿ:ಸಚಿವ ಗಡ್ಕರಿ
ಹೊಸದಿಲ್ಲಿ,ಮಾ.18: ವಾಹನ ಗುಜರಿ ನೀತಿಯಡಿ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸ ಕಾರುಗಳನ್ನು ಖರೀದಿಸುವವರಿಗೆ ಸುಮಾರು ಶೇ.5ರಷ್ಟು ರಿಯಾಯಿತಿಯು ದೊರೆಯಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ,ಹೆದ್ದಾರಿಗಳು ಮತ್ತು ಎಂಎಸ್‌ಎಂಇ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.
2021-22ನೇ ಸಾಲಿನ ಮುಂಗಡಪತ್ರದಲ್ಲಿ ಪ್ರಕಟಿಸಲಾಗಿರುವ ಸ್ವಯಂಪ್ರೇರಿತ ವಾಹನ ಗುಜರಿ ನೀತಿಯಡಿ ಖಾಸಗಿ ವಾಹನಗಳನ್ನು 20 ವರ್ಷಗಳ ಬಳಿಕ ಮತ್ತು ವಾಣಿಜ್ಯ ವಾಹನಗಳನ್ನು 15 ವರ್ಷಗಳ ಬಳಿಕ ಫಿಟ್‌ನೆಸ್ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಪರೀಕ್ಷೆಯಲ್ಲಿ ವಿಫಲಗೊಂಡರೆ ಅವುಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಾಗಲಿದೆ. ಅಲ್ಲದೆ ಮರುನೋಂದಣಿಯು ತುಂಬಾ ದುಬಾರಿಯಾಗಲಿದೆ.
ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕುವವರು ಗುಜರಿ ಪ್ರಮಾಣಪತ್ರವನ್ನು ಸಲ್ಲಿಸಿದರೆ ಹೊಸ ವಾಹನಗಳ ಖರೀದಿಗೆ ಶೇ.5ರಷ್ಟು ರಿಯಾಯಿತಿಯನ್ನು ಒದಗಿಸುವಂತೆ ವಾಹನ ತಯಾರಕರಿಗೆ ಸೂಚಿಸಲಾಗಿದೆ ಎಂದು ಗಡ್ಕರಿ ತಿಳಿಸಿದರು.
ನೂತನ ಗುಜರಿ ನೀತಿಯಿಂದ ಹೊಸ ವಾಹನಗಳ ಮಾರಾಟ ಹೆಚ್ಚಲಿದೆ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿ ಸುಮಾರು 40,000 ಕೋ.ರೂ.ಗಳ ಏರಿಕೆಯಾಗಲಿದೆ ಎಂದ ಗಡ್ಕರಿ,ನೋಂದಾಯಿತ ಗುಜರಿ ಕೇಂದ್ರಗಳ ಮೂಲಕ ತಮ್ಮ ಹಳೆಯ ಮತ್ತು ಬಳಕೆಗೆ ಅನರ್ಹ ವಾಹನಗಳನ್ನು ಗುಜರಿಗೆ ಹಾಕುವ ಮಾಲಿಕರಿಗೆ ಆಕರ್ಷಕ ಉತ್ತೇಜನ ಕ್ರಮಗಳನ್ನು ಜಾರಿಗೆ ತರಲಾಗುವುದು. ಸದ್ರಿ ಗುಜರಿ ಕೇಂದ್ರಗಳು ಮಾಲಿಕರಿಗೆ ಗುಜರಿ ಪ್ರಮಾಣಪತ್ರಗಳನ್ನು ವಿತರಿಸಲಿವೆ ಎಂದರು. ಉತ್ತೇಜನ ಕ್ರಮಗಳನ್ನು ಪಟ್ಟಿ ಮಾಡಿದ ಅವರು,ಗುಜರಿಗೆ ಹಾಕಲಾದ ವಾಹನಕ್ಕೆ ಹೊಸ ವಾಹನದ ಶೋರೂಮ್ ಬೆಲೆಯ ಸುಮಾರು ಶೇ.4ರಿಂದ ಶೇ.6ರಷ್ಟು ವೌಲ್ಯವನ್ನು ಗುಜರಿ ಕೇಂದ್ರವು ಪಾವತಿಸಲಿದೆ. ರಸ್ತೆ ತೆರಿಗೆಯಲ್ಲಿ ಖಾಸಗಿ ವಾಹನಗಳಿಗೆ ಶೇ.25ರವರೆಗೆ ಮತ್ತು ವಾಣಿಜ್ಯ ವಾಹನಗಳಿಗೆ ಶೇ.16ರಷ್ಟು ರಿಯಾಯಿತಿಯನ್ನು ಒದಗಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಬಹುದಾಗಿದೆ. ಇದರ ಜೊತೆಗೆ ಗುಜರಿ ಪ್ರಮಾಣಪತ್ರವನ್ನು ಸಲ್ಲಿಸಿದರೆ ಹೊಸ ವಾಹನಕ್ಕೆ ನೋಂದಣಿ ಶುಲ್ಕಗಳನ್ನು ಮನ್ನಾ ಮಾಡಬಹುದು ಎಂದು ತಿಳಿಸಿದರು.