×
Ad

ಪಠ್ಯ ಪುಸ್ತಕದಲ್ಲಿ ಇಸ್ಲಾಂಗೆ ಭಯೋತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸಿದ ಆರೋಪ: ಎಫ್‌ಐಆರ್ ದಾಖಲು

Update: 2021-03-18 20:34 IST

ಜೈಪುರ, ಮಾ. 17: ಹನ್ನೆರಡನೇ ತರಗತಿ ಪಠ್ಯ ಪುಸ್ತಕದಲ್ಲಿ ಇಸ್ಲಾಂಗೆ ಭಯೋತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸಿದ ಆರೋಪದಲ್ಲಿ ರಾಜಸ್ಥಾನ ರಾಜ್ಯ ಪಠ್ಯಪುಸ್ತಕ ಮಂಡಳಿ ಹಾಗೂ ಇನ್ನೊಂದು ಖಾಸಗಿ ಪ್ರಕಟನಾ ಸಂಸ್ಥೆ ವಿರುದ್ಧ ಜೈಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಜೈಪುರದ ಹಳೇ ನಗರದಲ್ಲಿರುವ ಪ್ರಕಟನಾ ಸಂಸ್ಥೆಯ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮುಸ್ಲಿಂ ಫೋರಂ ಹಾಗೂ ಆಡಳಿತಾರೂಢ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಯೋಜಕ ಮೊಹ್ಸಿನ್ ರಶೀದ್ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ರಾಜಸ್ಥಾನ ರಾಜ್ಯ ಪಠ್ಯಪುಸ್ತಕ ಮಂಡಳಿಯ 12ನೇ ತರಗತಿಯ ರಾಜಕೀಯ ಶಾಸ್ತ್ರ ಪಠ್ಯ ಪುಸ್ತಕದ ‘ಭಯೋತ್ಪಾದನೆ, ರಾಜಕೀಯ ಹಾಗೂ ಭ್ರಷ್ಟಾಚಾರದ ಅಪರಾಧೀಕರಣ’ ಅಧ್ಯಾಯದಲ್ಲಿ ಭಯೋತ್ಪಾದನೆ ಬಗ್ಗೆ ಹೇಳಲಾಗಿದೆ. ಅಲ್ಲದೆ, 257ನೇ ಪುಟದಲ್ಲಿ ಈ ಕೆಳಗಿನಲ್ಲಿ ಯಾವುದು ಮುಸ್ಲಿಂ ಭಯೋತ್ಪಾದನೆಯ ಉದ್ದೇಶವಲ್ಲ ? ಎಂದು ಕೇಳಲಾಗಿದೆ. ಅದಕ್ಕೆ ಮೂರು ಆಯ್ಕೆಗಳನ್ನು ನೀಡಲಾಗಿದೆ. ಮುಂದಿನ ಪುಟದಲ್ಲಿ ಸಂಕ್ಷಿಪ್ತ ಉತ್ತರ ಬಯಸುವ ಪ್ರಶ್ನೆಗಳಲ್ಲಿ ‘‘ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ನಿಮ್ಮ ಅಭಿಪ್ರಾಯವೇನು ?’’ ಎಂದು ಕೇಳಲಾಗಿದೆ. ರಾಜಸ್ಥಾನ ಸೆಕೆಂಡರಿ ಎಜುಕೇಶನ್ ಮಂಡಳಿಗಾಗಿ ಜೈಪುರದ ರಾಜಸ್ಥಾನ ರಾಜ್ಯ ಪಠ್ಯಪುಸ್ತಕ ಮಂಡಳಿ ಈ ಪಠ್ಯಪುಸ್ತಕವನ್ನು ಪ್ರಕಟಿಸಿದೆ.

ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಅಧಿಕಾರಾವಧಿಯಲ್ಲಿ ಈ ಪಠ್ಯ ಪುಸ್ತಕವನ್ನು ಪರಿಚಯಿಸಲಾಗಿತ್ತು. ‘‘ಇಸ್ಲಾಂಗೆ ಭಯೋತ್ಪಾದನೆಯೊಂದಿಗೆ ನೇರವಾಗಿ ಸಂಬಂಧ ಕಲ್ಪಿಸುವ ಹಾಗೂ ಇಸ್ಲಾಮ್ ಭಯೋತ್ಪಾದನೆ ಪದವನ್ನು ಮತ್ತೆ ಮತ್ತೆ ಬಳಸುವ ಈ ಪಠ್ಯ ಪುಸ್ತಕ ಇಸ್ಲಾಂ ಅನ್ನು ದ್ವೇಷಿಸಿದೆ ಹಾಗೂ ಅವಮಾನಿಸಿದೆ. ಇದು ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಸಮುದಾಯವನ್ನು ಪ್ರಚೋದಿಸಲು ಪ್ರಯತ್ನಿಸಿದೆ ಹಾಗೂ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಮೊಹ್ಸಿನ್ ರಶೀದ್ ಹೇಳಿದ್ದಾರೆ. ಈ ನಡುವೆ ಜೈಪುರ ಆದರ್ಶ ನಗರದ ಕಾಂಗ್ರೆಸ್ ಶಾಸಕ ರಫೀಕ್ ಖಾನ್ ವಿಧಾನ ಸಭೆಯಲ್ಲಿ ಈ ವಿಷಯ ಎತ್ತಿದ್ದಾರೆ. ಅಲ್ಲದೆ, ಪ್ರಕಟನಾ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News