ಚುನಾವಣಾ ಬಾಂಡ್: ಚುನಾವಣೆಗೆ ಮುನ್ನ ಮಾರಾಟಕ್ಕೆ ತಡೆ ಕೋರಿರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ

Update: 2021-03-18 16:04 GMT

ಹೊಸದಿಲ್ಲಿ,ಮಾ.18: ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಮುನ್ನ ಚುನಾವಣಾ ಬಾಂಡ್‌ಗಳ ಮಾರಾಟವನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ತುರ್ತು ವಿಚಾರಣೆಯನ್ನು ಮಾ.24ರಂದು ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ಸಮ್ಮತಿಸಿದೆ. ಚುನಾವಣೆಗಳಿಗೆ ಮುನ್ನ ಬಾಂಡ್‌ಗಳ ಮಾರಾಟವು ಬೇನಾಮಿ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾನೂನು ಬಾಹಿರ ಆರ್ಥಿಕ ನೆರವನ್ನು ಹೆಚ್ಚಿಸುವ ಗಂಭೀರ ಆತಂಕವಿದೆ ಎಂದು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮಾ.9ರಂದು ಸಲ್ಲಿಸಿರುವ ಅರ್ಜಿಯಲ್ಲಿ ಕಳವಳವನ್ನು ವ್ಯಕ್ತಪಡಿಸಿತ್ತು.

ಚುನಾವಣಾ ಬಾಂಡ್‌ಗಳು ವ್ಯಕ್ತಿಗಳು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕ್‌ನಿಂದ ಖರೀದಿಸಿ ರಾಜಕೀಯ ಪಕ್ಷಗಳಿಗೆ ನೀಡಬಹುದಾದ ಹಣಕಾಸು ಸಾಧನಗಳಾಗಿವೆ. ಈ ಪಕ್ಷಗಳು ಈ ಬಾಂಡ್‌ಗಳನ್ನು ನಗದೀಕರಿಸಲು ಮುಕ್ತವಾಗಿರುತ್ತವೆ. ಕೇಂದ್ರವು 2018,ಜನವರಿಯಲ್ಲಿ ಮೊದಲ ಬಾರಿಗೆ ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತಂದಿತ್ತು.

ಪ.ಬಂಗಾಳ,ತಮಿಳುನಾಡು,ಅಸ್ಸಾಂ,ಕೇರಳ ಮತ್ತು ಪುದುಚೇರಿಗಳಲ್ಲಿ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಎ.1ರಿಂದ ಹೊಸ ಬಾಂಡ್‌ಗಳನ್ನು ವಿತರಿಸಲಾಗುತ್ತದೆ. ಹೀಗಾಗಿ ತಮ್ಮ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಅವರು ಗುರುವಾರದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವನ್ನು ಕೋರಿಕೊಂಡರು. ಚುನಾವಣಾ ಬಾಂಡ್‌ಗಳು ಬೇನಾಮಿ ಕಂಪನಿಗಳ ಮೂಲಕ ಅಕ್ರಮ ಹಣದ ಹರಿವಿಗೆ ಅವಕಾಶ ಕಲ್ಪಿಸುತ್ತವೆ ಎಂದು ಚುನಾವಣಾ ಆಯೋಗವು ಹೇಳಿದೆ ಎಂದೂ ಅವರು ತಿಳಿಸಿದರು.

2017ರಿಂದಲೂ ಈ ವಿಷಯವು ಬಾಕಿಯಿದೆ. ಚುನಾವಣಾ ಬಾಂಡ್‌ಗಳು ಬಿಡುಗಡೆಯಾದಾಗಲೆಲ್ಲ ನಾವು ಅದನ್ನು ತಡೆಯಲು ಕೋರಿ ಅರ್ಜಿಗಳನ್ನು ಸಲ್ಲಿಸುತ್ತಲೇ ಇದ್ದೇವೆ ಎಂದು ಭೂಷಣ್ ಹೇಳಿದಾಗ,ಈ ಹಿಂದೆ ಅರ್ಜಿ ತಿರಸ್ಕರಿಸಲ್ಪಟ್ಟಿತ್ತೇ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಪ್ರಶ್ನಿಸಿದರು.

ಇದಕ್ಕೆ ಭೂಷಣ್,ವಿಷಯವು ಅದಲ್ಲ,ತಾವು ಸ್ವೀಕರಿಸಿರುವ ದೇಣಿಗೆಗಳ ಕುರಿತು ಮಾಹಿತಿಗಳನ್ನು ಮುಚ್ಚಿದ ಲಕೋಟೆಗಳಲ್ಲಿ ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಪಕ್ಷಗಳಿಗೆ ತಿಳಿಸಿತ್ತು ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News