ಋತುಸ್ರಾವದ ಸಂದರ್ಭದಲ್ಲಿ ರಕ್ತಕಣ್ಣೀರು ಸುರಿಸುತ್ತಿದ್ದ ಯುವತಿ

Update: 2021-03-18 17:25 GMT

ಚಂಡಿಗಡ,ಮಾ.18: ಇಲ್ಲಿಯ 25ರ ಹರೆಯದ ಯುವತಿಯೋರ್ವಳು ರಕ್ತಕಣ್ಣೀರು ಸುರಿಸುತ್ತಿದ್ದುದು ಬಹಿರಂಗಗೊಂಡಿದ್ದು,ಇದು ಜನರಿಗೆ ಆಘಾತವನ್ನುಂಟು ಮಾಡಿದೆ.

ಈ ವಿಚಿತ್ರ ಸಮಸ್ಯೆಯಿಂದ ನರಳುತ್ತಿದ್ದ ಯುವತಿ ಇಲ್ಲಿಯ ಆಸ್ಪತ್ರೆಯೊಂದರ ಎಮರ್ಜನ್ಸಿ ವಾರ್ಡ್‌ಗೆ ಭೇಟಿ ನೀಡಿ ವೈದ್ಯರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು. ತಿಂಗಳ ಹಿಂದೆಯೂ ಇಂತಹುದೇ ಸಮಸ್ಯೆಯನ್ನು ತಾನು ಅನುಭವಿಸಿದ್ದೆ ಎಂದೂ ಆಕೆ ತಿಳಿಸಿದ್ದಳು. ರಕ್ತಕಣ್ಣೀರು ಸುರಿಸುವಾಗ ಯಾವುದೇ ನೋವು ಅಥವಾ ಅಹಿತಕರ ಅನುಭವವಾಗುವುದಿಲ್ಲ ಎಂದು ಆಕೆ ಹೇಳಿದ್ದಳು.

ರಕ್ತಕಣ್ಣೀರಿಗೆ ಕಾರಣಗಳನ್ನು ತಿಳಿದುಕೊಳ್ಳಲು ವಿವಿಧ ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದರು. ವಿವರವಾದ ತಪಾಸಣೆಯ ಬಳಿಕ ರಕ್ತಕಣ್ಣೀರು ಸುರಿಸಿದ್ದ ಎರಡೂ ಸಂದರ್ಭಗಳಲ್ಲಿ ಯುವತಿ ಋತುಮತಿಯಾಗಿದ್ದಳು ಎನ್ನುವುದು ಗೊತ್ತಾಗಿತ್ತು.

ಯುವತಿಯು ‘ಒಕ್ಯುಲರ್ ವಿಕಾರಿಯಸ್ ಮೆನ್‌ಸ್ಟ್ರುಯೇಷನ್ ’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ನಿರ್ಧಾರಕ್ಕೆ ವೈದ್ಯರು ಬಂದಿದ್ದರು. ಈ ಸ್ಥಿತಿಗೆ ಕಾರಣವು ಈವರೆಗೆ ನಿಖರವಾಗಿ ಗೊತ್ತಾಗಿಲ್ಲವಾದರೂ ಎಂಡೊಮೆಟ್ರಿಯಾಸಿಸ್ ಅಥವಾ ಜನನಾಂಗ ಪ್ರದೇಶದ ಹೊರಗಿನ ಅಂಗಗಳಲ್ಲಿ ಗರ್ಭಕೋಶದ ಅಂಗಾಂಶದ ಅಸ್ತಿತ್ವವು ಈ ಸ್ಥಿತಿಯನ್ನುಂಟು ಮಾಡುವ ಅಂಶವಾಗಿರಬಹುದು ಎಂದು ತಜ್ಞರು ನಂಬಿದ್ದಾರೆ.

ವೈದ್ಯರು ಈಸ್ಟ್ರೋಜನ್ ಮತ್ತು ಪ್ರೊಜೆಸ್ಟೆರೋನ್‌ಗಳನ್ನು ಒಳಗೊಂಡ ಕೆಲವು ಮಾತ್ರೆಗಳನ್ನು ಸೇವಿಸುವಂತೆ ಸೂಚಿಸಿದ್ದು,ಮೂರು ತಿಂಗಳು ಅದನ್ನು ತಾನು ಪಾಲಿಸಿದ್ದೇನೆ ಮತ್ತು ಈಗ ರಕ್ತಕಣ್ಣೀರಿನ ಅನುಭವ ತನಗಾಗುತ್ತಿಲ್ಲ ಎಂದು ಯುವತಿ ತಿಳಿಸಿದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News