ರೈತರನ್ನು ರಾಜಕೀಯವಾಗಿ ಪ್ರಜ್ಞಾವಂತರಾಗಿಸುವುದು ನಮ್ಮ ಗುರಿ: ಗಂಗಾಧರ್

Update: 2021-03-19 05:14 GMT

ಶಿವಮೊಗ್ಗ, ಮಾ.18: ವಿವಾದಿತ ನೂತನ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿ ದಿಲ್ಲಿಯ ಗಡಿಗಳಲ್ಲಿ ರೈತರ ಪ್ರತಿಭಟನೆ ನೂರು ದಿನಗಳನ್ನು ದಾಟಿ ಮುಂದುವರಿದಿದೆ. ರೈತರ ಪ್ರತಿಭಟನೆಗೆ ವಿವಿಧ ರಾಜ್ಯಗಳ ರೈತರು ಕೈ ಜೋಡಿಸುತ್ತಿದ್ದಾರೆ. ಉತ್ತರ ಭಾರತಕ್ಕೆ ಸೀಮಿತವಾಗಿರುವ ರೈತ ಮಹಾಪಂಚಾಯತ್ ಇದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ದಕ್ಷಿಣ ಭಾರತದ ಮೊದಲ ರೈತ ಮಹಾಪಂಚಾಯತ್ ಮಲೆನಾಡು ಶಿವಮೊಗ್ಗದಲ್ಲಿ ನಡೆಯುತ್ತಿದೆ. ಸಮಾಜವಾದಿ ಹೋರಾಟದ ತವರು ನೆಲ, ಸಮಾಜವಾದದ ಆಶಯಗಳನ್ನು ಬಿತ್ತಿದ, ಉತ್ತಿದ ಜಿಲ್ಲೆ ಶಿವಮೊಗ್ಗ. ರೈತ ಮಹಾಪಂಚಾಯತ್ ಅಂಗವಾಗಿ ರಾಜ್ಯ ರೈತ ಸಂಘದ ಮುಖಂಡರು,ರೈತ ಮಹಾ ಪಂಚಾಯತ್‌ನ ಸಂಚಾಲಕರಾದ ಕೆ.ಟಿ. ಗಂಗಾಧರ್ ಅವರು ‘ವಾರ್ತಾಭಾರತಿ’ಗೆ ಸಂದರ್ಶನ ನೀಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಪ್ರಶ್ನೆ: ಕರ್ನಾಟಕದಲ್ಲಿ ರೈತರ ಮುಖ್ಯ ಸಮಸ್ಯೆಗಳೇನು?

ಉತ್ತರ: ರಾಜ್ಯದ ರೈತರ ಸಮಸ್ಯೆಗಳನ್ನು ಮೂರು ಭಾಗಗಳಾಗಿ ಮಾಡಿದ್ದೇವೆ.

1. ಮಳೆ ಆಧಾರಿತ ಕೃಷಿ ಸಮಸ್ಯೆಗಳು.

2. ನೀರಾವರಿ ಆಧಾರಿತ ಕೃಷಿ ಸಮಸ್ಯೆಗಳು.

3. ಕರಾವಳಿ ಮತ್ತು ಮಲೆನಾಡಿನ ರೈತರ ಕೃಷಿ ಸಮಸ್ಯೆಗಳು.

ಈ ಮೂರು ಭಾಗಗಳಲ್ಲಿ ಬರುವ ಬಯಲು ಸೀಮೆಯ ರೈತರ ಮಳೆ ಆಧಾರಿತ ಕೃಷಿ ಭೂಮಿಯಲ್ಲಿ ಬರಗಾಲವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕು. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯವಾದ ಯೋಜನೆಗಳನ್ನು ರೂಪಿಸಬೇಕು. ನೀರಾವರಿ ಜಲಾಶಯಗಳನ್ನು ಕಟ್ಟಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು. ಕೃಷಿ ಉತ್ಪನ್ನಗಳಿಗೆ ಖರೀದಿ ವೇಳೆ ಹಣ ಕೊಡದೆ ವಂಚಿಸುತ್ತಿದ್ದಾರೆ. ಇವೆಲ್ಲಾ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಸಾಲ ಮುಕ್ತ ಬೇಸಾಯ ಮಾಡುವ ಆರ್ಥಿಕ ನೀತಿ ಜಾರಿಗೆ ಬರಬೇಕು. ಕೃಷಿ ಸಾಲ ಕೊಡುವ ವಿಧಾನ ಮತ್ತು ವಸೂಲಾತಿ ವಿಧಾನದಲ್ಲಿ ಬದಲಾವಣೆಯಾಗಬೇಕು. ಮತ್ತೊಂದು, ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಸಿದ್ಧತಾ ವಸ್ತುಗಳನ್ನು ಮಾರಾಟ ಮಾಡುವಂತಹ ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಹಳ್ಳಿಗಳಲ್ಲಿ ಸ್ಥಾಪನೆ ಮಾಡಬೇಕು. ಇದರಿಂದ ಉದ್ಯೋಗ ಗ್ಯಾರಂಟಿಯಾಗುತ್ತದೆ.ಹಣಕಾಸಿನ ಲೇವಾದೇವಿಯಾಗುವುದರಿಂದ ಹಳ್ಳಿಗಳು ಲವಲವಿಕೆ ಯಿಂದ ಕೂಡಿರುತ್ತವೆ. ದೇಶದ ಜಿಡಿಪಿ ಜಾಸ್ತಿಯಾಗುತ್ತದೆ.

ಪ್ರಶ್ನೆ: ಕರ್ನಾಟಕದಲ್ಲಿ ರೈತ ಸಂಘಗಳು ದುರ್ಬಲವಾಗಿವೆ. ರಾಜಕೀಯ ಶಕ್ತಿಯಾಗಿ ರೈತ ಸಂಘಗಳು ಬೆಳೆದಿಲ್ಲ. ಈ ಬಗ್ಗೆ?

ಉತ್ತರ: ಮೊದಲನೆಯದಾಗಿ ರೈತರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಲ್ಲಿ ಮಾತ್ರ ತನ್ನ ಸಮಸ್ಯೆಗಳು ನಿವಾರಣೆಯಾಗಬಹುದು ಎನ್ನುವುದು ಅವರು ಅರಿಯಬೇಕು. ತನ್ನದೇ ವೈಯಕ್ತಿಕ ಸಮಸ್ಯೆಗಳಿಂ ದಾಗಿ ರಾಜಕೀಯ ಕ್ಷೇತ್ರವನ್ನು ರೈತ ಸಂಪೂರ್ಣ ಮರೆತಿದ್ದಾನೆ. ರಾಜಕೀಯವಾಗಿ ಸಂಘಟಿತರಾಗಲು ಅವರಿಗೆ ಕಷ್ಟವಾಗಿದೆ.

ಮುಂದಿನ ದಿನಮಾನಗಳಲ್ಲಿ ರೈತರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಅವರಿಗೆ ಪರವಾದ ಕಾನೂನು ಸರಕಾರ ಅನುಷ್ಠಾನಗೊಳಿಸಬಹುದು. 1980 ರಿಂದ 83ರವರೆಗೆ ನಡೆದ ರೈತ ಚಳವಳಿ, ದಲಿತ ಚಳವಳಿಗಳು, ಬಂಡಾಯ ಸಾಹಿತ್ಯ, ಬರಹಗಾರರ ಒಕ್ಕೂಟ ಮತ್ತು ಚಿಂತಕರು, ಆರ್ಥಿಕ ತಜ್ಞರು ಸೇರಿದಂತೆ ಎಲ್ಲರೂ ಪಟ್ಟ ಶ್ರಮದಿಂದ 1983ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದು ರೈತ ಶಕ್ತಿ. ಸಹಕಾರಿ ಕ್ಷೇತ್ರದ ಸಾಲ ವಸೂಲಿ ಪದ್ಧತಿಗೆ(101(ಸಿ))ಬದಲಾವಣೆ ತರಲು ಹೊರಟ ರಾಮಕೃಷ್ಣ ಹೆಗಡೆ ಸರಕಾರವನ್ನು ಮನೆಗೆ ಕಳುಹಿಸಿದ್ದು ರೈತರೇ. ರೈತರ ಪರ ನಾವಿದ್ದೇವೆ ಎಂದ ಯಡಿಯೂರಪ್ಪ ನೇತೃತ್ವದ ಬಿಜೆಪಿಯವರಿಗೆ ಮತ ಕೊಟ್ಟವರು ರೈತರೇ. ಈಗ ಬಿಜೆಪಿಯವರು ರೈತರಿಗೆ ದೊಡ್ಡ ಮಟ್ಟದ ದ್ರೋಹ ಮಾಡಿದ್ದಾರೆ. ಅದು ರೈತರಿಗೆ ಅರಿವಾಗಿದೆ. ಭವಿಷ್ಯದಲ್ಲಿ ಅವರ ಸರಕಾರವನ್ನು ಕಿತ್ತು ಹಾಕುವುದೂ ರೈತ ಸಮುದಾಯವೇ. ರೈತರೇ ಸಂಘಟಿತರಾಗಿ ರಾಜಕೀಯ ಪಕ್ಷವೊಂದನ್ನು ಕಟ್ಟುವ ಅಗತ್ಯವಿದೆ.

ಪ್ರಶ್ನೆ: ಪಂಜಾಬ್, ಹರ್ಯಾಣ, ಉತ್ತರ ಪ್ರದೇಶಕ್ಕಷ್ಟೇ ರೈತರ ಪ್ರತಿಭಟನೆ ಸೀಮಿತವಾಗಿದೆ ಎನ್ನುತ್ತಾರಲ್ಲ?

ಉತ್ತರ: ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ಹರಡಿದ ವದಂತಿಯಾಗಿದೆ. ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರದ ಶೇಡ್ಗರಿ ಸಂಘಟನ್, ತೆಲಂಗಾಣದಲ್ಲಿ ರೈತರ ಪ್ರತಿಭಟನೆಗಳು ನಡೆದಿವೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಹೇಳಿಕೆ ಸುಳ್ಳು ಮಾಡಲು ದಕ್ಷಿಣ ಭಾರತದ ಮೊದಲ ಮಹಾಪಂಚಾಯತ್‌ನ್ನು ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಲ್ಲೂ ರೈತ ಚಳವಳಿ ಹುಟ್ಟಿದ ಶಿವಮೊಗ್ಗದಲ್ಲಿ ಆ ಜಾಗದಿಂದಲೇ ದಕ್ಷಿಣ ರಾಜ್ಯದ ಕಹಳೆ ಮೊಳಗಿಸುತ್ತಿದ್ದೇವೆ.

ಶಿವಮೊಗ್ಗ ಆದ ನಂತರ ಹಾವೇರಿ, ಬೆಳಗಾವಿ, ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ. ಆನಂತರ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲೂ ರೈತ ಚಳವಳಿ ಮುಂದುವರಿಯಲಿದೆ.

ಪ್ರಶ್ನೆ: ಈ ಮಹಾಪಂಚಾಯತನ್ನು ಶಿವಮೊಗ್ಗದಲ್ಲೇ ಹಮ್ಮಿಕೊಳ್ಳಲು ಕಾರಣವೇನು?

ಉತ್ತರ: ಉಳುವವನೆ ಭೂಮಿಯ ಒಡೆಯ ಅನ್ನುವಂತಹ ಕಾನೂನು ಜಾರಿಗೆ ತಂದು ಸಾಂವಿಧಾನಿಕ ಕಟ್ಟುಪಾಡುಗಳನ್ನು ರೂಪಿಸಲು ಕಾರಣೀಭೂತವಾಗಿದ್ದು ಶಿವಮೊಗ್ಗ ನೆಲ. ಹಾಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನರಗುಂದ-ನವಲಗುಂದ ಬಂಡಾಯವಾದ ಮೇಲೆ ರೈತ ಚಳವಳಿ, ರೈತ ಸಂಘಟನೆ ತೀವ್ರತೆಯನ್ನು ಪಡೆಯಿತು. ರೈತ ಸಂಘಟನೆಗಳು ಮೊಳಕೆಯೊಡೆದದ್ದೇ ಶಿವಮೊಗ್ಗದ ನೆಲದಲ್ಲಿ. ಸಮಾಜವಾದಿಗಳಾದ ಶಾಂತವೇರಿ ಗೋಪಾಲ ಗೌಡರು, ವೈ.ಆರ್.ಪರಮೇಶ್ವರಪ್ಪನವರು, ಅಣ್ಣಯ್ಯನವರು, ಜೆ.ಎಚ್. ಪಟೇಲ್, ಕಾಗೋಡು ತಿಮ್ಮಪ್ಪ ಹಾಗೂ ಬಂಗಾರಪ್ಪನವರ ಆದಿಯಾಗಿ ರೈತ ಚಳವಳಿಗೆ ಬೆಂಬಲ ಕೊಟ್ಟಿದ್ದರು. ಆ ಕಾಲಕ್ಕೆ ಖುದ್ದು ರಾಮ್‌ಮನೋಹರ್ ಲೋಹಿಯಾ ಇಲ್ಲಿಗೆ ಬಂದು ಈ ಚಳವಳಿಯನ್ನು ಬೆಂಬಲಿಸಿ ಉಳುವವನೆ ಭೂಮಿಯ ಒಡೆಯ ಅನ್ನುವಂತಹ ಕಾಯ್ದೆ ಜಾರಿಗೆ ತರಲು ಶ್ರಮಿಸಿದ್ದರು. ಉಳುವವನೆ ಭೂಮಿಯ ಒಡೆಯ ಕಾನೂನು ಜಾರಿಗೆ ತಂದು ಸಾಂವಿಧಾನಿಕ ಕಟ್ಟುಪಾಡುಗಳನ್ನು ರೂಪಿಸಲು ಕಾರಣೀಭೂತವಾಗಿದ್ದು ಶಿವಮೊಗ್ಗದ ನೆಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿಯ ಒಡೆಯ ಅನ್ನುವುದನ್ನು ತೆಗೆದುಹಾಕಿ ಉಳ್ಳವನೆ ಭೂಮಿ ಒಡೆಯನಾಗಬೇಕು ಎಂದು ಬದಲಾಯಿಸಿದ್ದಾರೆ. ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ವಿರುದ್ಧ ಮತ್ತೊಮ್ಮೆ ರೈತ ಕಹಳೆ ಊದುವ ಪ್ರಯತ್ನವಾಗಿ ಶಿವಮೊಗ್ಗವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ.

ಪ್ರಶ್ನೆ: ಮಲೆನಾಡಿನ ರೈತರ ಪ್ರಮುಖ ಸಮಸ್ಯೆಗಳು ಯಾವುವು?

ಉತ್ತರ: ಮಲೆನಾಡಿನಲ್ಲಿ ಮಳೆ ಹೆಚ್ಚಾಗಿ ಫಲವತ್ತಾದ ಭೂಮಿಯ ಮೇಲ್ಪದರದ ಮಣ್ಣಿನ ಸವಕಳಿಯಿಂದಾಗಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಇದು ದೊಡ್ಡ ಅಪಾಯಕಾರಿ ಬೆಳವಣಿಗೆ. ಇಲ್ಲಿ ಸಮತಟ್ಟಾದ ಭೂಮಿ ಇಲ್ಲ. ಗುಡ್ಡಗಾಡು ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿಯುವುದರಿಂದ ಮೇಲ್ಮೈ ಮಣ್ಣು ಸವಕಳಿಯಿಂದಾಗಿ ಭೂಮಿ ಫಲವತ್ತತೆ ಇಲ್ಲದೆ ಇಳುವರಿ ಕಡಿಮೆಯಾಗುತ್ತಿದೆ.. ಡೀಮ್ಡ್ ಫಾರೆಸ್ಟ್‌ನಿಂದ ಬಗರ್ ಹುಕುಂ ರೈತರಿಗೆ ಹಕ್ಕುಪತ್ರ ಕೊಡಲು ಸಾಧ್ಯವಾಗುತ್ತಿಲ್ಲ. ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಮಂಜೂರು ಮಾಡಲು ಕಾನೂನು ತೊಡಕುಗಳಿವೆ. ಸರಕಾರ ಜಂಟಿ ಸರ್ವೇ ನಡೆಸಿ ಜಮೀನು ಮಂಜೂರು ಮಾಡಲು ಅನುಕೂಲವಾಗುವ ಹಾಗೆ ಅರಣ್ಯ ಕಾಯ್ದೆಗಳಿಗೆ ಸರಕಾರ ತಿದ್ದುಪಡಿ ತರಬೇಕು. ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕಂದಾಯ ಕಾಯ್ದೆ 192(ಎ)ಗೆ ತಿದ್ದುಪಡಿ ತಂದು ಭೂಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿತ್ತು. ನಗರ ಪ್ರದೇಶಕ್ಕೆ ತಂದಿದ್ದ ಭೂಕಬಳಿಕೆ ನಿಷೇಧ ಕಾಯ್ದೆಯನ್ನು ಅರಣ್ಯ ಇಲಾಖೆಯವರು ಮಲೆನಾಡಿನಲ್ಲಿ ಜಾರಿಗೆ ತಂದು ಒತ್ತುವರಿ ಮಾಡಿದ ಬಗರ್ ಹುಕುಂ ರೈತರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ಸರಕಾರ ಶೀಘ್ರವಾಗಿ ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು. ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಷ್ಟವಾಗುತ್ತಿದೆ ಮತ್ತು ಪ್ರಾಣ ಭಯದಿಂದ ಬದುಕುವಂತಹ ಹೀನಾಯ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನಲ್ಲಿ ಅರಣ್ಯದ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೆರ್ ಪ್ರದೇಶದಲ್ಲಿ ಅರಣ್ಯವಲ್ಲದ ನೀಲಗಿರಿ, ಅಕೇಶಿಯಾ ನೆಟ್ಟು ನಿತ್ಯಹರಿದ್ವರ್ಣ ಕಾಡುಗಳನ್ನು ನಾಶ ಮಾಡುವಂತಹ ಅರಣ್ಯ ನೀತಿಗೆ ತಿದ್ದುಪಡಿಯಾಗಬೇಕು.

ಪ್ರಶ್ನೆ: ಈ ಪಂಚಾಯತ್‌ನಲ್ಲಿ ರಾಜ್ಯದ ಎಷ್ಟು ರೈತ ಸಂಘಟನೆಗಳು ಭಾಗವಹಿಸುತ್ತಿವೆ?

ಉತ್ತರ: ವಿಘಟಿತ ಬಣಗಳ ರೈತ ನಾಯಕರನ್ನು ಖುದ್ದು ಆಹ್ವಾನಿಸಲಾಗಿದೆ. ಎಲ್ಲರೂ ಒಳಗೊಳ್ಳುವ ಹಾಗೆ ಚಳವಳಿಯನ್ನು ಆಯೋಜನೆ ಮಾಡಲಾಗಿದೆ. ಪ್ರೊ.ನಂಜುಂಡ ಸ್ವಾಮಿ ಬಣ, ಪುಟ್ಟಣ್ಣಯ್ಯನವರ ಬಣ, ಕೋಡಿಹಳ್ಳಿ ಚಂದ್ರಶೇಖರ್ ಬಣ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ, ಉತ್ತರ ಕರ್ನಾಟಕದ ರೈತ ಸಂಘಟನೆ, ಬಯಲುಸೀಮೆಯ ರಾಜ್ಯ ರೈತ ಸಂಘಟನೆ ಸೇರಿದಂತೆ ರಾಜ್ಯದ ಹಲವಾರು ರೈತ ಸಂಘಟನೆಗಳು ಭಾಗವಹಿಸಲಿವೆ.

ಪ್ರಶ್ನೆ: ಈ ಪಂಚಾಯತ್‌ನಲ್ಲಿ ಎಷ್ಟು ಜನ ಸೇರುವ ನಿರೀಕ್ಷೆ ಇದೆ?

ಉತ್ತರ: ತುಮಕೂರು, ದಾವಣಗೆರೆ, ಹೊನ್ನಾಳಿ, ಚಿಕ್ಕಮಗಳೂರು, ತರೀಕೆರೆ, ನ್ಯಾಮತಿ ಸೇರಿದಂತೆ ವಿವಿಧ ಕಡೆಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಆಗಮಿಸುತ್ತಿದ್ದಾರೆ. ಸ್ವಯಂ ಪ್ರೇರಿತರಾಗಿ ಬರುತ್ತಿದ್ದಾರೆ.

ಪ್ರಶ್ನೆ: ನಿಮ್ಮ ಪ್ರಚಾರಕ್ಕೆ ರೈತರ ಬೆಂಬಲ ಹೇಗಿತ್ತು?

ಉತ್ತರ:  ರೈತರ ಮಹಾಪಂಚಾಯತ್‌ನಲ್ಲಿ ಭಾಗವಹಿಸುವಂತೆ ಜಿಲ್ಲೆಯ ಪ್ರತಿ ಹಳ್ಳಿಹಳ್ಳಿಗಳಲ್ಲೂ ಪ್ರಚಾರ ನಡೆಸಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರೈತರನ್ನೂ ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿದ್ದೇವೆ. ಜಿಲ್ಲೆಯ ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ಬರಹಗಾರರು, ಅಡಿಕೆ ವರ್ತಕರ ಮಂಡಿ, ತರಕಾರಿ ವರ್ತಕರ ಮಂಡಿ, ಚಿಲ್ಲರೆ ವರ್ತಕರ ಮಂಡಿ, ಸಗಟು ವ್ಯಾಪಾರಿಗಳು ಈ ಸಮಾವೇಶವನ್ನು ಬೆಂಬಲಿಸಿದ್ದಾರೆ.

Writer - ಸಂದರ್ಶನ: ಶರತ್ ಪುರದಾಳ್

contributor

Editor - ಸಂದರ್ಶನ: ಶರತ್ ಪುರದಾಳ್

contributor

Similar News