ಬಂಗಾಳಕ್ಕೆ ದುರ್ಯೋಧನ, ದುಶ್ಯಾಸನ ಬೇಕಾಗಿಲ್ಲ: ಬಿಜೆಪಿ ನಾಯಕರ ವಿರುದ್ಧ ಮಮತಾ ವಾಗ್ದಾಳಿ
ಹೊಸದಿಲ್ಲಿ: ಬಿಜೆಪಿಯ ಪ್ರಮುಖ ಮುಖಂಡರ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಮ್ಮ ರಾಜ್ಯವು ದುರ್ಯೋಧನ, ದುಶ್ಯಾಸನನನ್ನು ಬಯಸುವುದಿಲ್ಲ ಎಂದಿದ್ದಾರೆ.
ಪೂರ್ವ ಮಿಡ್ನಾಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ, ಯಾರೂ ಕೂಡ ಬಿಜೆಪಿಗೆ ಮತ ಹಾಕಬಾರದೆಂದು ವಿನಂತಿಸಿದರು. ತಮ್ಮ ಸುತ್ತಮುತ್ತಲು ಕಾಣಿಸಿಕೊಂಡಿರುವ ಹೊರಗಿನವರ ಬಗ್ಗೆ ಎಚ್ಚರದಿಂದಿರುವಂತೆ ಕಿವಿಮಾತು ಹೇಳಿದ್ದಾರೆ.
“ನಮಗೆ ಬಿಜೆಪಿ ಬೇಡ. ಬಿಜೆಪಿಗೆ ವಿದಾಯ ಹೇಳಿ. ನಾವು ಮೋದಿ ಮುಖವನ್ನು ನೋಡಲು ಬಯಸುವುದಿಲ್ಲ. ದಂಗೆಕೋರರು ಹಾಗೂ ಲೂಟಿಕೋರರನ್ನು ನಾವು ಬಯಸುವುದಿಲ್ಲ. ನಮಗೆ ದುರ್ಯೋಧನ, ದುಶ್ಯಾಸನ ಹಾಗೂ ಮೀರ್ ಜಾಫರ್ ಬೇಕಾಗಿಲ್ಲ'' ಎಂದರು.
ಗದ್ದಾರ್ ಗಳು, ಮೀರ್ ಜಾಫರ್ ಗಳು(ದ್ರೋಹಿಗಳು)ಈಗ ಬಿಜೆಪಿಯ ಅಭ್ಯರ್ಥಿಗಳು. ಇವರು ಬಿಜೆಪಿಯ ಹಿರಿಯರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಈ ಎಲ್ಲ ಪಕ್ಷಾಂತರಿಗಳಿಗೆ ನಾನು ಈ ಹಿಂದೆ ಹಲವು ಜವಾಬ್ದಾರಿಗಳನ್ನು ನೀಡಿದ್ದೆ. ಆದರೆ ಎಲ್ಲ ಯೋಜನೆಯನ್ನು ನಾನು ನೋಡಿಕೊಳ್ಳುತ್ತಿದ್ದೆ. ಹೀಗಾಗಿ ಅದು ಎಲ್ಲರಿಗೂ ಅದು ತಲುಪಿದೆ ಎಂದರು.