ದಿಲ್ಲಿ: ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ಶತಾಯುಷಿ ಮಹಿಳೆ

Update: 2021-03-19 16:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.19: ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶತಾಯುಷಿ ಪಟ್ಟಕ್ಕೇರಿದ್ದ ಮಹಿಳೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ.

ದಿವಂಗತ ಮೇ.ಜ.(ನಿವೃತ್ತ) ಚಾಂದ್ ಎನ್.ದಾಸ್ ಅವರ ಪತ್ನಿ ಕಮಲಾ ದಾಸ್ ಗುರುವಾರ ಲಸಿಕೆಯನ್ನು ಪಡೆದುಕೊಂಡಿದ್ದು,ಆ ಸಂದರ್ಭದಲ್ಲಿ ತನಗೆ ಯಾವುದೇ ನೋವು ಆಗಲಿಲ್ಲ ಎಂದು ಹೇಳಿದ್ದಾರೆ.

‘ನಮ್ಮ ತಾಯಿ ಕೋವಿಡ್ ಸಂದರ್ಭದಲ್ಲಿಯೇ ನೂರು ವರ್ಷಗಳನ್ನು ಪೂರ್ಣಗೊಳಿಸಿದ್ದು,ಆಗ ಹೆಚ್ಚು ಜನರು ಸೇರಲು ಅವಕಾಶವಿರದ್ದರಿಂದ ಅವರ ಹುಟ್ಟುಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಿ ಅತಿಥಿಗಳ ಆಗಮನಕ್ಕೆ ಅವಕಾಶ ಕಲ್ಪಿಸಿದ್ದೆವು. ತಾಯಿಗೆ ಕೋವಿಡ್ ಸೋಂಕು ತಗಲಬಹುದು ಎಂದು ನನ್ನ ಒಡಹುಟ್ಟಿದವರು ಆತಂಕಗೊಂಡಿದ್ದರು. ಆದರೆ ಆಕೆ ಉತ್ತಮ ರೀತಿಯಲ್ಲಿ ಬದುಕಿದ್ದಾರೆ ಮತ್ತು ಪ್ರತಿಯೊಬ್ಬರಿಗೂ ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸುವ ಭಾಗ್ಯವಿರುವುದಿಲ್ಲ. ಹೀಗಾಗಿ ಈ ಹುಟ್ಟುಹಬ್ಬವನ್ನು ನಮ್ಮ ತಾಯಿಯ ಪಾಲಿಗೆ ವಿಶೇಷವಾಗಿ ಮಾಡಿದ್ದೆವು ’ಎಂದು ಕಮಲಾ ದಾಸ್ ಅವರ ಕಿರಿಯ ಪುತ್ರಿ ಜ್ಯೋತಿಕಾ ಸಿಕಂದ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

1920,ಸೆ.3ರಂದು ಈಗಿನ ಪಾಕಿಸ್ತಾನದ ಸಿಂಧ್‌ನಲ್ಲಿ ಜನಿಸಿದ್ದ ಕಮಲಾ ದಾಸ್ ಇಲ್ಲಿಯ ಬಿಎಲ್‌ಕೆ ಆಸ್ಪತ್ರೆಯಲ್ಲಿ ಲಸಿಕೆಯನ್ನು ಪಡೆದುಕೊಂಡರು. ಬುಧವಾರ ಇನ್ನೋರ್ವ ಶತಾಯುಷಿ ಬ್ರಿಜ್‌ಪ್ರಕಾಶ ಗುಪ್ತಾ ಅವರೂ ಇದೇ ಆಸ್ಪತ್ರೆಯಲ್ಲಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News