ಪ್ರತಿಭಟನಾಕಾರರಿಂದಲೇ ನಷ್ಟ ಭರ್ತಿ ಮಸೂದೆಗೆ ಹರ್ಯಾಣ ವಿಧಾನಸಭೆ ಅನುಮೋದನೆ
ಚಂಡೀಗಢ, ಮಾ.19: ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿರೋಧದ ಮಧ್ಯೆಯೇ, ಪ್ರತಿಭಟನೆಯ ಸಂದರ್ಭ ಆಸ್ತಿಪಾಸ್ತಿಗೆ ಆಗುವ ನಷ್ಟವನ್ನು ಪ್ರತಿಭಟನಾಕಾರರಿಂದಲೇ ವಸೂಲಿ ಮಾಡಲು ಅವಕಾಶ ನೀಡುವ ಮಸೂದೆಗೆ ಹರ್ಯಾಣ ವಿಧಾನಸಭೆ ಅನುಮೋದನೆ ನೀಡಿದೆ. ಈ ಮಸೂದೆ ರೈತರ ಪ್ರತಿಭಟನೆಗೆ ಸಂಬಂಧಿಸಿದೆ ಎಂದು ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸೂದೆಯನ್ನು ಧ್ವನಿಮತದಿಂದ ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಗ್ಯಾನ್‌ಚಂದ್ ಗುಪ್ತಾ ಘೋಷಿಸಿದಾಗ ಕೆಲವು ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ನುಗ್ಗಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ‘ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎಸಗುವವರ ಮನದಲ್ಲಿ ಹೆದರಿಕೆ ಹುಟ್ಟಿಸುವ ಅಗತ್ಯವಿದೆ. ರಾಜ್ಯದ 2.5 ಕೋಟಿ ಜನರ ಆಸ್ತಿಯನ್ನು ರಕ್ಷಿಸುವ ಹೊಣೆ ಸರಕಾರದ್ದಾಗಿದೆ ಮತ್ತು ಈ ಮಸೂದೆಯನ್ನು ಈ ಹಿಂದೆಯೇ ಜಾರಿಗೊಳಿಸಬೇಕಿತ್ತು ಎಂದರು.
ಮಸೂದೆಯನ್ನು ವಿರೋಧಿಸಿರುವ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಭೂಪಿಂದರ್‌ಸಿಂಗ್ ಹೂಡಾ, ಹೊಸ ಕಾನೂನು ಪ್ರಜಾಪ್ರಭುತ್ವದ ಕತ್ತು ಹಿಸುಕಲಿದೆ ಎಂದು ಟೀಕಿಸಿದರು. ಕೆಲ ದಿನಗಳ ಹಿಂದೆ ರಾಜ್ಯಸರಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿದ್ದ ಪಕ್ಷೇತರ ಶಾಸಕ ಸೋಂಬೀರ್ ಸಂಗ್ವಾನ್ ‘ರೈತರ ಮನದಲ್ಲಿ ಭೀತಿ ಹುಟ್ಟಿಸುವ ಮೂಲಕ ರೈತರ ಪ್ರತಿಭಟನೆಯನ್ನು ದುರ್ಬಲಗೊಳಿಸುವ ಹುನ್ನಾರವಿದು’ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆ ಮಧ್ಯದಲ್ಲೇ ಅನುಮೋದನೆಗೊಂಡಿರುವ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದರೆ ಕಾಯ್ದೆಯಾಗಿ ಜಾರಿಗೊಳ್ಳಲಿದೆ.